Kaliyugada Kalpataru Sri Baahika Rajaru Lineage and Descent

|| ಶ್ರೀಗುರುರಾಜೋ ವಿಜಯತೇ ||

ಮೂರನೆಯ ಉಲ್ಲಾಸ

ಶ್ರೀಬಾಹ್ಲೀಕರಾಜರರು

೨. ವಂಶಪರಂಪರೆ

ಪ್ರಹ್ಲಾದರಾಜರು ಭಾರತಾವನಿಯಲ್ಲಿ ಅವತರಿಸಿದ ವಿಚಾರವನ್ನು ನಿರೂಪಿಸುವ ಮೊದಲು ಆ ಮಹನೀಯರು ಜನಿಸಿದ ಭಾರತದ ವಿಖ್ಯಾತವಾದ ವಂಶಪರಂಪರೆಯನ್ನಿಲ್ಲಿನಿರೂಪಿಸಬಯಸುವೆವು.

ಸರ್ವಲೋಕಪಿತಾಮಹರಾದ ಚತುರ್ಮುಖ ಬ್ರಹ್ಮದೇವರಿಗೆ ಅತ್ರಿ ಎಂಬ ಪುತ್ರರಾದರು. ಅವರ ಪುತ್ರನೇ ಚಂದ್ರ. ಚಂದ್ರನಿಗೆ ಬುಧ ಮಗನಾದನು. ಈ ವಂಶವು ಚಂದ್ರವಂಶವೆಂದು ಜಗದ್ವಿಖ್ಯಾತವಾಯಿತು. ಚಂದ್ರನ ಪುತ್ರನಾದ ಬುಧನಿಗೆ ಪುರೂರವನು ಪುತ್ರನು. ವಿಖ್ಯಾತನಾದ ಈ ಪುರೂರವನ ಮಗ ಆಯು. ಅವನ ಮಗನೇ ನಹುಷ ಚಕ್ರವರ್ತಿ. ನಹುಷನಿಗೆ ಯಯಾತಿ ಎಂಬ ವಿಖ್ಯಾತ ಮಗನಾದನು. ಈ ಯಯಾತಿಗೆ ಇಬ್ಬರು ಪತ್ನಿಯರು, ದೈತ್ಯಗುರುಗಳಾದ ಶುಕ್ರಾಚಾರ್ಯರ ಮಗಳಾದ ದೇವಯಾನಿಯು ಒಬ್ಬ ಪತ್ನಿ, ಮತ್ತೊಬ್ಬಳು ವೃಷಪರ್ವನೆಂಬ ದಾನವ ಚಕ್ರವರ್ತಿಯ ಮಗಳಾದ ಶರ್ಮಿಷ್ಠೆ.

ಯಯಾತಿ ಮಹಾರಾಜನಿಗೆ ಈ ಈರ್ವರು ಪತ್ನಿಯರಲ್ಲಿ ಶ್ರೀವಿಷ್ಣುಪಾದಾಸಕ್ತರಾದ ಐದು ಜನ ಪುತ್ರರುದಯಿಸಿದರು. ದೇವಯಾನಿಯಲ್ಲಿ ಯಮರಾಜ ಮತ್ತು ಚತುರ್ವಸು ಎಂಬ ಇಬ್ಬರು ಮಕ್ಕಳೂ, ಶರ್ಮಿಷಾದೇವಿಯಲ್ಲಿ ದ್ರುಹ್ಮು, ಅನು ಮತ್ತು ಪುರು ಎಂಬ ಮೂವರು ಪುತ್ರರೂ ಜನಿಸಿದರು. ದೇವಯಾನಿ ಶರ್ಮಿಷ್ಠೆಯರಲ್ಲಿ ದೇವಕೀ-ರೋಹಿಣಿಯರಲ್ಲಿ ಬಲಭದ್ರನು ಜನಿಸಿದಂತೆ ಪುರುವು ಅವತರಿಸಿ ಪ್ರಖ್ಯಾತನಾದನು.

ದೇವಯಾನಿಯ ಮಗನಾದ ಯದುರಾಜನ ವಂಶದಲ್ಲಿ ಜನಿಸಿದ ದತ್ತಾತ್ರೇಯನಾಮಕ ಶ್ರೀವಿಷ್ಣುವಿನ ಪ್ರಸಾದದಿಂದ ಅಣಿಮಾದೃಷ್ಟಯೋಗಸಿದ್ಧಿಯನ್ನು ಪಡೆದ ಕಾರ್ತವೀರ್ಯಾರ್ಜುನನು ಹುಟ್ಟಿದನು. ಅವನ ಸಂತತಿಯಲ್ಲಿ ಯಾದವರು ಪ್ರಖ್ಯಾತರಾದರು. ಅವರಿಗೆಲ್ಲ ಮುಖ್ಯಾಶ್ರಯನಾಗಿಯೇ ಶ್ರೀಮನ್ನಾರಾಯಣನು ಶ್ರೀಕೃಷ್ಣರೂಪದಿಂದ ಅವತರಿಸಿದನು.

ಶರ್ಮಿಷ್ಠೆಯ ಪುತ್ರನಾದ ಪುರು ಚಕ್ರವರ್ತಿಯ ವಂಶದಲ್ಲಿ ಶ್ರೀಹರಿಪ್ರಿಯನಾದ ಭರತ ಚಕ್ರವರ್ತಿಯು ಜನಿಸಿದನು.ಈ ಭರತ ಚಕ್ರವರ್ತಿಯ ಒಂದು ವಂಶದಲ್ಲಿ ಕುರುರಾಜನೂ ಮತ್ತೊಂದು ವಂಶದಲ್ಲಿ ಪ್ರತೀಮಾಜನೂ ಜನಿಸಿದನು.

ಇಂತು ವಿಖ್ಯಾತವಾದ ಚಂದ್ರವಂಶದ ಕುರು ಮತ್ತು ಪ್ರತಿಪರಾಜರು ಶ್ರೀಹರಿ ಭಕ್ತರಾಗಿ ಲೋಕದಲ್ಲಿ ವಿಖ್ಯಾತಿ ಗಳಿಸಿ ಸಮಸ್ತ ಪ್ರಜರನ್ನು ತಂದೆಯಂತೆ ಪ್ರೀತಿಯಿಂದ ಸಲಹುತ್ತಾಧರ್ಮಿಷ್ಟರಾಗಿ ಪ್ರಜಾಪಾಲನೆ ಮಾಡುತ್ತಾ ಕೀರ್ತಿ ಗಳಿಸಿದರು.

ಪ್ರತೀಪರಾಜ ದಂಪತಿಗಳಿಗೆ ಶ್ರೀಹರಿಯ ಅನುಗ್ರಹದಿಂದ ಓರ್ವ ಪುತ್ರನು ಜನಿಸಿದನು. ಅವನಿಗೆ 'ದೇವಾಪಿ' ಎಂದು ನಾಮಕರಣವಾಯಿತು. ಮಗುವು ದಷ್ಟಪುಷ್ಟಾಂಗವಾಗಿ ಸುಂದರವಾಗಿದ್ದರೂ ದುರ್ದೈವದಿಂದ ದೇವಾಪಿಯು ಕುಷ್ಠರೋಗಯುಕ್ತನಾಗಿದ್ದುದರಿಂದ ಮಾತಾಪಿತೃಗಳು ಮತ್ತು ಬಾಂಧವರಿಗೆ ಬಹಳ ದುಃಖವಾಯಿತು. ದೈವೇಚ್ಛೆಗೆ ಯಾರನು ಮಾಡಲಾದೀತು? ಅಂತೆಯೇ ಪ್ರತೀಪಾದ ದುಪಡಿಗಳು ಹೇಗೋ ಸಮಾಧಾನ ತಾಳಿದರು ಮತ್ತು ಪತ್ರನನ್ನು ಪ್ರೀತಿ-ವಿಶ್ವಾಗಳಿಂದ ರಾಜಯೋಗ್ಯರೀತಿಯಲ್ಲಿ ಸಾಕಿ ಸಲಹಿದರು. ಆದರೂ ಪ್ರತಿಪ ರಾಜರಿಗೆ ಮನಸ್ಸಿನಲ್ಲಿ ವಂಶೋದ್ಧಾರಕನಾಗಿ ಚಕ್ರವರ್ತಿಯಾಗಿ ಬಾಳಬೇಕಾದ ಮಗನು ಕುಷ್ಠರೋಗ ವಿಶಿಷ್ಟನಾಗಿದ್ದುದರಿಂದ ತಮ್ಮ ವಂಶದ ಮುಂದಿನ ಏಳಿಗೆ ಹೇಗೆಂಬ ಚಿಂತೆ ಇದ್ದೇ ಇತ್ತು.

ಕುಲಹಿರಿಯರ ಸಲಹೆಯಂತೆ ಪ್ರತೀಪರಾಜ ದಂಪತಿಗಳು ವಂಶವರ್ಧಕನೂ, ಕೀರ್ತಿಶಾಲಿಯೂ ಆದ ಕರುಣಿಸುವಂತೆ ಶ್ರೀಪರಮಾತ್ಮನನ್ನು ಪ್ರಾರ್ಥಿಸಿ ಆರಾಧಿಸತೊಡಗಿದರು. “ಕಿಮಲಭ್ಯಂ ಭಗವತಿ ಪ್ರಸನ್ನ ಶ್ರೀನಿಕೇತನ * ಷಡ್ಗುಣೈಶ್ವರ್ಯಸಂಪನ್ನನಾದ ಶ್ರೀಲಕ್ಷ್ಮೀಜಾನಿಯು ಒಲಿದರೆ ಅವುದು ತಾನೇ ಅಸಾಧ್ಯವಾದೀತು ? ಶ್ರೀಹರಿಯ ಕೃಪಾದೃಷ್ಟಿ ಈ ದಂಪತಿಗಳ ಮೇಲೆ ಬಿತ್ತೆಂದು ತೋರುತ್ತದೆ. ಅಂತೆಯೇ ಪ್ರತಿಪಾಜನ ಪತ್ನಿಯು ಮತ್ತೆ ಗರ್ಭಧರಿಸಿದಳು. ಇದರಿಂದ ಸರ್ವರಿಗೂ ಪರಮಾನಂದವಾಯಿತು.