Kaliyugada Kalpataru Sri Baahika Rajaru Emperor Shantanu of the Kuru Dynasty

|| ಶ್ರೀಗುರುರಾಜೋ ವಿಜಯತೇ ||

ಮೂರನೆಯ ಉಲ್ಲಾಸ

ಶ್ರೀಬಾಹ್ಲೀಕರಾಜರರು

೪. ಕುರುವಂಶ ಚಕ್ರವರ್ತಿ ಶಂತನು

ಬಾಹ್ಲೀಕರಾಜರರ ಸಹೋದರನೂ, ಕುರುಪಾಂಡವರಿಗೆ ಮೂಲಪುರುಷನೂ ಆದ ಶಂತನು ಚಕ್ರವರ್ತಿಯ ವಿಚಾರ ತಿಳಿಯುವುದು ಅವಶ್ಯವಾದ್ದರಿಂದ ಇಲ್ಲಿ ಆ ವಿಚಾರವನ್ನು ಸ್ವಲ್ಪ ವಿವರಿಸುವುದು ಅಪ್ರಕೃತವಾಗಲಾರದು.

ಶ್ರೀಮಧ್ವಾಚಾರ್ಯರು ತಮ್ಮ “ಮಹಾಭಾರತ ತಾತ್ಪರ್ಯನಿರ್ಣಯ'ವೆಂಬ ವಿಮರ್ಶಾತ್ಮಕ ಗ್ರಂಥದಲ್ಲಿ ಪ್ರತೀಮರಾಜನ ಮೂರನೆಯ ಪುತ್ರನಾದ ಶಂತನು ಚಕ್ರವರ್ತಿಯ ಮೂಲರೂಪ ಮತ್ತು ಅವತಾರ ಕಾರಣ, ಚರಿತೆ ಮುಂತಾದ ವಿಚಾರಗಳನ್ನು ಚೆನ್ನಾಗಿ ನಿರೂಪಿಸಿದ್ದಾರೆ. ಮಹಾಭಾರತದಲ್ಲಿ ಬರುವ ವ್ಯಕ್ತಿಗಳ ಚಿತ್ರಣವನ್ನು ವಿಶ್ಲೇಷಿಸಿ ಪ್ರಾಮಾಣಿಕವಾಗಿ ಬರೆದಿರುವ ಆಚಾರ್ಯರ ಗ್ರಂಥಾನುಸಾರವಾಗಿ ಶಂತನು ಕಥೆ ಹೀಗಿದೆ :

ಹಿಂದೆ ಒಮ್ಮೆ ಕಮಲಾಸನಾದ ಶ್ರೀಬ್ರಹ್ಮದೇವರು ಪೂರ್ವ ಸಮುದ್ರದದ ಪಶ್ಚಿಮತೀರಕ್ಕೆ, ಗಂಗಾ-ಸಮುದ್ರ ಸಂಗಮಸ್ಥಳಕ್ಕೆ ಪರ್ವಕಾಲವಾಗಿದ್ದುದರಿಂದ ದಯಮಾಡಿಸಿದ್ದರು. ಅಂದು ಪೂರ್ಣಿಮಾದಿನವಾಗಿದ್ದಿತು. ಪರ್ವಕಾಲ ಪ್ರಯುಕ್ತ ಬಿರುಗಾಳಿ, ದೊಡ್ಡ ದೊಡ್ಡ ಅಲೆಗಳಿಂದ ವಿಜೃಂಭಿಸಿದ ಸಮುದ್ರರಾಜನು ಉಕ್ಕೇರಿ ಧ್ಯಾನಾಸಕ್ತರಾಗಿ ಕುಳಿತಿದ್ದ ಬ್ರಹ್ಮದೇವರ ಮೇಲೆ ಬಲವಾಗಿ ಅಪ್ಪಳಿಸಿದನು. ಸಮುದ್ರ ಜಲವು ಅವರ ಮೇಲೆ ಬಿದ್ದಿದ್ದರಿಂದ ಅದೊಂದು ಅಭಿಷೇಕವೇ ಆಯಿತು! ಅದರಿಂದ ಕೋಪಗೊಂಡ ಬ್ರಹ್ಮದೇವರು - “ವರುಣ! ಶಾಂತನಾಗು” ಎಂದರು. ಸಮುದ್ರರಾಜ ಶಾಂತನಾದ. ಆಗ ಚತುರಾನನರು “ವರುಣ! ನೀನು ಮದಿಸಿ ನನಗೆ ಮಹಾಭಿಷೇಕ ಮಾಡಿದ್ದರಿಂದ 'ಮಹಾಭಿಷೇಕ್' ಎಂಬ ರಾಜನಾಗಿ ಭೂಮಿಯಲ್ಲಿ ಜನಿಸು. ನಂತರ ನಾನು ಶಾಂತನಾಗೆಂದ ಕೂಡಲೇ ಶಾಂತತನವುಳ್ಳವನಾದ್ದರಿಂದ ಅದರ ಮುಂದಿನ ಜನ್ಮದಲ್ಲಿ ನೀನು ಶಂತನು ಎಂಬ ಹೆಸರಿನಿಂದ ಜನಿಸು. ಆಗ ಈ ಗಂಗಾದೇವಿಯೂ ದೇವತಾಕಾರ್ಯನಿಮಿತ್ತನಾಗಿ ನಿನಗೆ ಪತ್ನಿಯಾಗುವಳು” ಎಂದು ವರುಣದೇವನಿಗೆ ಶಾಪವನ್ನು ಪ್ರದಾನ ಮಾಡಿದರು. ಬ್ರಹ್ಮದೇವರ ಶಾಪದಿಂದ ವರುಣದೇವರು ಮುಂದೆ ಮಹಾಭಿಷೇಕ್ ಎಂಬ ಹೆಸರಿನ ರಾಜನಾಗಿ ಹುಟ್ಟಿ ಬಹುಕಾಲ ರಾಜ್ಯಭಾರ ಮಾಡಿ ಮತ್ತೆ ಬ್ರಹ್ಮದೇವರ ಆಸ್ಥಾನಕ್ಕೆ ಮರಳಿದರು.

ಮುಂದೊಂದು ಸಲ ಬ್ರಹ್ಮಸಭೆಯಲ್ಲಿ ಗಂಗಾದೇವಿಯು ಬರುವಾಗ ಅವರ ವಸ್ತ್ರಗಳು ಅಸ್ತವ್ಯಸ್ತವಾಯಿತು. ಎಲ್ಲರೂ ತಲೆಬಗ್ಗಿಸಿ ಕುಳಿತರು. ಆದರೆ ವರುಣದೇವರು ಮಾತ್ರ ನಗ್ನಳಾದ ಗಂಗಾದೇವಿಯನ್ನು ಆಶೆಯ ಕಣ್ಣುಗಳಿಂದ ನೋಡಿದರು. ಇದನ್ನು ಗಮನಿಸಿದ ಬ್ರಹ್ಮದೇವರು “ವರುಣ! ನಗ್ನ ಸ್ತ್ರೀಯನ್ನು ದರ್ಶನ ಮಾಡಿದ ನೀನು ಮನುಷ್ಯನಾಗಿ ಭೂಲೋಕದಲ್ಲಿ ಶಂತನು ಎಂಬ ರಾಜನಾಗಿ ಜನಿಸು!” ಎಂದು ಶಾಪವಿತ್ತರು. ಈ ಶಾಪವು ಹಿಂದೆ ನೀಡಿದ್ದ ಶಾಪವನ್ನು ಕಾರ್ಯರೂಪಕ್ಕೆ ತರಲೆಂದೇ ಆಗಿತ್ತು. ಶಾಪ ಪಡೆದ ವರುಣದೇವರು ಭೂಮಿಯಲ್ಲಿ ಪ್ರತೀಪರಾಜರ ಮಗನಾಗಿ ಶಂತನು ಎಂಬ ಹೆಸರಿನಿಂದ ಅವತರಿಸಿ, ಮುಂದೆ ಗಂಗಾದೇವಿಯ ಕರಪಿಡಿದರು.

ಶಂತನು-ಗಂಗಾದೇವಿಯರಿಗೆ ಮೊದಲ ಏಳು ಜನ ವಸುಗಳು ಪುತ್ರರಾಗಿ ಜನಿಸಿದರು. ಅವರೆಲ್ಲರನ್ನೂ ಗಂಗೆಯು ಸಂಹರಿಸುತ್ತಿದ್ದಳು. ಮುಂದೆ ಅವರಿಗೆ ಅಷ್ಟವಸುಗಳಲ್ಲೊಬ್ಬನಾದ ದುನಾಮಕವಸುವು ಮಗನಾಗಿ ಜನಿಸಿದನು. ಅವನಿಗೆ ಶಂತನು, ದೇವವ್ರತನೆಂದು ನಾಮಕರಣ ಮಾಡಿದನು. ಆ ದೇವವ್ರತನೇ ಕುರುಕುಲಪಿತಾಮಹನಾದ ಭೀಷ್ಮಾಚಾರ್ಯನು ಶಂತನು ಚಕ್ರವರ್ತಿಯು ಸಕಲಶಾಸ್ತ್ರ ಶಸ್ತ್ರಾಸ್ತ್ರಗಳಲ್ಲಿ ಪಾರಂಗತನಾದ ದೇವವ್ರತನನ್ನು ವಾಜಪದದಲ್ಲಿ ಪಟ್ಟಾಭಿಷೇಕ

ಮಾಡಿ ಮುಗಿಸಿದನು.

ಪೂರ್ವದಲ್ಲಿ 'ಅಗ್ನಿಷ್ಟಾತ್ತ'ರೆಂದು ಖ್ಯಾತರಾದ ಪಿತೃದೇವತೆಗಳ ಮನಸ್ಸಿನಿಂದ 'ಅಯ್ಯೋವಾ' ಎಂಬ ಹೆಸರಿನಿಂದ ಹುಟ್ಟಿದ ಕುಮಾರಿಯು ಶ್ರೀಹರಿಯನ್ನು ಮಗನನ್ನಾಗಿ ಪಡೆಯುವ ಅಭಿಲಾಷೆಯಿಂದ ಶ್ರೀಮನ್ನಾರಾಯಣನನ್ನು ಕುರಿತು ತಪಸ್ಸು ಮಾಡಿದಳು. ಅವಳ ತಪಸ್ಸಿಗೆ ಮೆಚ್ಚಿದ ಶ್ರೀಹರಿಯು “ಮತ್ತೆ! ನಿನ್ನ ಮನೋರಥವನ್ನು ಪೂರೈಸುತ್ತೇನೆ” ಎಂದು ವರವನ್ನು ದಯಪಾಲಿಸಿದ್ದನು. ಆ ಅಚ್ಛೇದೆಯೇ ಈಗ ಭಾರತಾವನಿಯಲ್ಲಿ ವಸುರಾಜನಿಗೆ ಮಗಳಾಗಿ ಜನಿಸಿ, ದೈವಸಂಕಲ್ಪದಿಂದ ನಾವಿಕರಿಗೆ ಒಡೆಯನಾದ ದಾಶರಾಜನಿಗೆ ಸಿಕ್ಕು, ಅವರ ಮನೆಯಲ್ಲಿ ಪ್ರತ್ರಿಯಂತೆ 'ಕಾಳಿ' ಎಂಬ ಹೆಸರಿನಿಂದ ಬೆಳೆಯತೊಡಗಿದಳು.

ಒಮ್ಮೆ ಪರಾಶರ ಮುನಿಗಳನ್ನು ದೋಣಿಯಲ್ಲಿ ನದಿಯ ಅತ್ತಕಡೆಯ ದಡಕ್ಕೆ ಮುಟ್ಟಿಸಲು ದೋಣಿಯನ್ನು ನಡೆಸುತ್ತಿದ್ದ ಕಾಳಿಯನ್ನು ನೋಡಿ ಮೋಹಿತರಾದ ಪರಾಶರ ಋಷಿಗಳು ಅಂಗಸಂಗ ಮಾಡಿದರು. ಆಗ ಶ್ರೀಹರಿಯು ಶ್ರೀವೇದವ್ಯಾಸರೂಪದಿಂದ ಪತ್ರನಾಗಿ ಅವತರಿಸಿದನು, ಮಹಾತಪಸ್ವಿಗಳಾದ ಪರಾಶರರು ಕಾಳಿಗೆ ಮತ್ತೆ ಕನ್ನತವನ್ನು ಪ್ರದಾನ ಮಾಡಿ ಶ್ರೀವೇದವ್ಯಾಸರೊಡನೆ ತಮ್ಮ ಆಶ್ರಮಕ್ಕೆ ತೆರಳಿದರು.

ಹೀಗೆ ಭಗವಂತನನ್ನು ಪುತ್ರನಾಗಿ ಪಡೆದು ಪರಾಶರ ಮುನಿಗಳ ಅನುಗ್ರಹದಿಂದ ಮತ್ತೆ ಕನ್ಯತ್ವವನ್ನು ಪಡೆದು ಅತ್ಯಂತ ಸುಂದರಿಯಾಗಿ ದಾಶರಾಜನ ಮನೆಯಲ್ಲಿ ವಿರಾಜಿಸಿದ್ದ ಕಾಳಿಯನ್ನು ಒಮ್ಮೆ ಶಂತನು ಚಕ್ರವರ್ತಿಯು ನೋಡಿ ಅವಳಲ್ಲಿ ಮೋಹಪರವಶನಾಗಿ ಅವಳನ್ನು ಕರಪಿಡಿಯಬಯಸಿದನು. ಆದರೆ ದಾಶರಾಜನು ಇವಳ ಮಗನೇ ಚಕ್ರವರ್ತಿಯಾಗಲು ಒಪ್ಪಿದರೆ ಮಗಳನ್ನು ಕೊಡುವುದಾಗಿ ಹೇಳಿದನು. ಯುವರಾಜ ದೇವವ್ರತನಿರುವಾಗ ಈ ಕಾರ್ಯ ಅಸಾಧ್ಯವೆಂದು ಶಂತನು ಚಕ್ರವರ್ತಿ ನಿರಾಶನಾಗಿ ಹಿಂದಿರುಗಿ ಚಿಂತಾಕ್ರಾಂತನಾದನು. ಈ ವಿಚಾರವರಿತ ದೇವವ್ರತನು ತಂದೆಯ ಮನೋರಥವನ್ನು ಘಾರ್ಣಗೊಳಿಸಿ ಸಂತೋಷಪಡಿಸಲಾಶಿಸಿ ದಾಶರಾಜನ ನಿರ್ಬಂಧನೆಗಳನ್ನೊಪ್ಪಿ ಅವಳ ಪಾರ್ವೋತ್ತರಗಳನ್ನರಿತು “ಈ ನಿನ್ನ ಮಗಳ ಉದರದಲ್ಲಿ ಜನಿಸಿದ ಮಗನೇ ಚಕ್ರವರ್ತಿಯಾಗಲಿ. ನಾನು ಆಜನ್ಮ ಬ್ರಹ್ಮಚಾರಿಯಾಗಿದ್ದು ಸಾಮ್ರಾಜ್ಯ ರಕ್ಷಕನಾಗಿರುತ್ತೇನೆ” ಎಂದು ಪ್ರತಿಜ್ಞಾಬದನಾಗಿ ದಾಶರಾಜನ ಮಗಳೊಡನೆ ತಂದೆಯ ವಿವಾಹವನ್ನು ನೆರವೇರಿಸಿದನು. ದಾಶರಾಜನ ಮಗಳಾದ ಕಾಳಿಯೇ ಭರತಕುಲದ ಚಕ್ರವರ್ತಿಯಾದ ಶಂತುವಿನ ಮಡದಿಯಾಗಿ 'ಸತ್ಯವತಿ' ಎಂಬ ಹೆಸರಿನಿಂದ ವಿಖ್ಯಾತಳಾದಳು. ತಂದೆಗಾಗಿ ತನ್ನ ಸರ್ವಸ್ವವನ್ನೂ ತ್ಯಾಗಮಾಡಿದ ದೇವವ್ರತನ ಭೀಕರ ಪ್ರತಿಜ್ಞೆಯನ್ನು ಕಂಡು ದೇವತೆಗಳು ಅವನನ್ನು 'ಭೀಷ್ಮ'

ಎಂದು ಕರೆದು ಕೊಂಡಾಡಿದರು.

ಮುಂದೆ ಶಂತನು ಚಕ್ರವರ್ತಿಗೆ ವೇದವತಿಯಲ್ಲಿ ಚಿತ್ರಾಂಗದ-ವಿಚಿತ್ರವೀರ್ಯ ಎಂಬ ಈರ್ವರು ಪುತ್ರರಾದರು. ಶಂತನು ಚಕ್ರವರ್ತಿಯ ತರುವಾಯ ಚಿತ್ರಾಂಗದ ವಿಚಿತ್ರವೀರ್ಯರನ್ನು ಭೀಷ್ಮಾಚಾರ್ಯರು ಚಕ್ರವರ್ತಿ-ಯುವರಾಜರನ್ನಾಗಿ ಮಾಡಿದರು. ಚಿತ್ರಾಂಗದನನ್ನು, ದುರ್ವಿಧಿಯ ಕಾರಣವಾಗಿ ಚಿತ್ರಾಂಗದನೆಂಬ ಗಂಧರ್ವನು ಸಂಹಾರ ಮಾಡಿಬಿಟ್ಟನು. ಆಗ ವಿಚಿತ್ರವೀರ್ಯನನ್ನು ಚಕ್ರವರ್ತಿಯನ್ನಾಗಿ ಮಾಡಿ ಭೀಷ್ಮಾಚಾರ್ಯರು ಕಾಶೀರಾಜನ ಪುತ್ರಿಯರಾದ ಅಂಬಿಕಾ, ಅಂಬಾಲಿಕಾ ಎಂಬ ರಾಜಪುತ್ರಿಯರನ್ನು ತಂದುಕೊಂಡು ವಿಚಿತ್ರವೀರ್ಯನಿಗೆ ವಿವಾಹ ಮಾಡಿಸಿದರು. ಕೆಲಕಾಲ ಕಳೆದ ಮೇಲೆ ವಿಚಿತ್ರವೀರ್ಯನು ಕ್ಷಯರೋಗಪೀಡಿತನಾಗಿ ನಿಸ್ಸಂತಾನನಾಗಿ ಮೃತನಾದನು. ರಾಜ್ಯಕ್ಕೆ ದಿಕ್ಕಿಲ್ಲವಾದ್ದರಿಂದ ಗುರುಹಿರಿಯರ ಸಮ್ಮತಿ ಪಡೆದು ರಾಜಮಾತಾ ಸತ್ಯವತಿಯು ತನ್ನ ಪುತ್ರರೂ, ಭಗವಂತನ ಅವತಾರರೂ ಆದ ವೇದವ್ಯಾಸರ ಮನವೊಲಿಸಿ ಅಂಬಿಕಾ, ಅಂಬಾಲಿಕೆಯಲ್ಲಿ ಪುತ್ರೋತ್ಪತ್ತಿಯನ್ನು ಮಾಡಲು ಒಪ್ಪಿಸಿದಳು. ಶ್ರೀವೇದವ್ಯಾಸರಿಂದ 'ನಿಯೋಗದಿಂದ ಅಂಬಿಕೆಯು ಧೃತರಾಷ್ಟ್ರನನ್ನೂ, ಅಂಬಾಲಿಕೆಯು ಪಾಂಡುರಾಜನನ್ನೂ, ಭಕ್ತಳಾದ ದಾಸಿಯು ಭಗವದ್ಭಕ್ತನಾದ ವಿದುರನನ್ನೂ ಪತ್ರರಾಗಿ ಪಡೆದರು. ಶ್ರೀವೇದವ್ಯಾಸರ ನಿಯೋಗದಿಂದ ಪುತ್ರರ ಜನನಕ್ಕೆ ಕಾರಣರಾಗಿ ಕುರುಸಾಮ್ರಾಜ್ಯವನ್ನು ರಕ್ಷಿಸಿದರು. ಹೀಗೆ ಕೌರವ-ಪಾಂಡವರ ತಾತನೂ, ಭೀಷ್ಮಾಚಾರ್ಯರ ತಂದೆಯೂ ಆದ ಶಂತನು ಚಕ್ರವರ್ತಿಗೆ ಅಗ್ರಜರಾದ ಬಾಕರ ಮಹತ್ವ ಎಷ್ಟೆಂಬುದು ಇದರಿಂದ ಗೊತ್ತಾಗುವುದು.