|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

ಗುರುರಾಯರ ಬೃಂದಾವನವು ತಲೆದೂಗಿತು ! 

ಶ್ರೀರಾಘವೇಂದ್ರಸ್ವಾಮಿಗಳವರ ಬೃಂದಾವನ ತಲೆದೂಗಿತು! ಅಬ್ಬಾ, ಇದು ಅಚ್ಚರಿಯೆನಿಸಿದರೂ ನಡೆದ ಸತ್ಯ ಸಂಗತಿ ! ನಿಜ, ಹಿಂದೊಮ್ಮೆ ರಾಯರ ಬೃಂದಾವನ ಸ್ವಲ್ಪಕಾಲ ತಲೆದೂಗಿತು. ಈ ಅಪೂರ್ವಘಟನೆಯು ಸುಮಾರು ಕ್ರಿಸ್ತಶಕ ೧೭೩೫ರ ಹಾಗೆ ನಡೆಯಿತು. ಈ ಆಶ್ಚರ್ಯ ಘಟನೆಯನ್ನು ನೂರಾರು ಜನ ಕಣ್ಣಾರೆ ಕಂಡು ಆನಂದಿಸುವಂತೆ ಮಾಡಿದ ಮಹನೀಯರು ಶ್ರೀವಾದೀಂದ್ರತೀರ್ಥ ಶ್ರೀಪಾದಂಗಳವರು.

ಶ್ರೀವಾದೀಂದ್ರತೀರ್ಥರು ಮಹಾಸಂಸ್ಥಾನಾಧಿಪತಿಗಳಾಗುವುದಕ್ಕೆ ಮೊದಲು ಶ್ರೀಗುರುರಾಜರ ತರುವಾಯ ಶ್ರೀಮಹಾಚಾರ್ಯರ ಮಹಾಸಂಸ್ಥಾನದಲ್ಲಿ ಶ್ರೀಯೋಗೀಂದ್ರತೀರ್ಥರು 471 (ಕ್ರಿ.ಶ. ೧೬೭೧-೧೬೮೮) ಶ್ರೀಸೂರೀಂದ್ರತೀರ್ಥರು ೧೬೮೮-೧೬೯೨), ಶ್ರೀಸುಮತೀಂದ್ರತೀರ್ಥರು (೧೬೯೨-೧೭೨೫). ಶ್ರೀಉಪೇಂದ್ರತೀರ್ಥರು(೧೭೨೫-೧೭೨೮)ಗಳೆಂಬ ನಾಲ್ವರು ಜ್ಞಾನಿನಾಯಕರು (ಶ್ರೀರಾಯರಲ್ಲೇ ವ್ಯಾಸಂಗಮಾಡಿದ ಮಹಾಭಾಗ್ಯಶಾಲಿಗಳು) ಶ್ರೀಗುರುರಾಜರ ಆದೇಶದಂತೆ ಒಬ್ಬರಾದ ಮೇಲೊಬ್ಬರಂತೆ ಸುಮಾರು ೫೮ ವರ್ಷಗಳಕಾಲ ಮಹಾಸಂಸ್ಥಾನಾಧಿಪತಿಗಳಾಗಿದ್ದು ತಮ್ಮ ಜ್ಞಾನ-ಭಕ್ತಿ-ವೈರಾಗ್ಯ-ತಪಸ್ಸು-ಪರವಾದಿದಿಗ್ವಿಜಯ ಸಿದ್ಧಾಂತಸ್ಥಾಪನ, ಗ್ರಂಥರಚನ, ಪಾಠಪ್ರವಚನ ಲೋಕಕಲ್ಯಾಣಾದಿಗಳಿಂದ ಆಪಂಡಿತಪಾಮರರು, ರಾಜಾಧಿರಾಜರಿಂದ ಮಾನ್ಯರಾಗಿ ಸರ್ವಜ್ಞರ ವೇದಾಂತಸಾಮ್ರಾಜ್ಯದ ಕೀರ್ತಿಪಾತಕೆಯನ್ನು ಭಾರತದಲ್ಲೆಲ್ಲಾ ಮೆರಸಿ ದಿಗಂತವಿಶ್ರಾಂತ ಕೀರ್ತಿಗಳಿಸಿದರು. 

ಈ ಕಥಾನಕವು ನಡೆದ ವೇಳೆಗೆ ಆಗಲೇ ಗುರುರಾಜರ ಮರಿಮಕ್ಕಳಾದ ಶ್ರೀವಾದೀಂದ್ರತೀರ್ಥಗುರುಚರಣರು (ಕ್ರಿ.ಶ. ೧೭೨೮-೧೭೫೦) ಶ್ರೀಮದಾಚಾರರ ಮಹಾಸಂಸ್ಥಾನಾಧಿಪತಿಗಳಾಗಿ ಖ್ಯಾತಿಗಳಿಸಿದ್ದರು. 

ಮಂತ್ರಾಲಯ ಕ್ಷೇತ್ರದಲ್ಲಿ ಶ್ರೀರಾಯರ ಬೃಂದಾವನದ ಎಡಪಾರ್ಶ್ವದಲ್ಲಿ ಕಂಗೊಳಿಸುವ ಒಂದು ಸುಂದರ ಬೃಂದಾವನವಿದೆ. ಆ ಬೃಂದಾವನವನ್ನು ಮಂತ್ರಾಲಯಕ್ಕೆ ಯಾತ್ರಾರ್ಥಿಗಳಾಗಿ ಹೋಗುವ ಸಾವಿರಾರಾರು ಭಕ್ತರು ಬಲ್ಲರು. ಅದೇ ಶ್ರೀವಾದೀಂದ್ರತೀರ್ಥರ ಬೃಂದಾವನ ! 

ಶ್ರೀರಾಯರ ಭಕ್ತಾನುಗ್ರಹಕಾರ್ಯದಲ್ಲಿ ಶ್ರೀವಾದೀಂದ್ರರು ಅವರಿಗೆ ಮಂತ್ರಿಗಳಂತಿದ್ದು ಸಹಸ್ರಾರು ಜನ ಭಕ್ತರ ಸ್ವಪ್ನದಲ್ಲಿ ರಾಯರೊಡನೆ ದರ್ಶನವಿತ್ತು ಅನುಗ್ರಹಿಸುತ್ತಿರುವುದು ಅನುಭವಸಿದ್ದ ವಿಚಾರವಾಗಿದೆ. ರಾಯರ ಜೊತೆಗೆ ಭಕ್ತವೃಂದವನ್ನು ಪೊರೆಯುತ್ತಿರುವ ಇವರು ಸಾಮಾನ್ಯರಲ್ಲ! ರಾಯರ ವಿಶೇಷಾನುಗ್ರಹಪಾತ್ರರಿವರು. ಮಂತ್ರಾಲಯ ಸ್ವಾಮಿಗಳಿಗೆ ಇವರಲ್ಲಿ ಅನುಪಮ ಪ್ರೀತಿ ವಾತ್ಸಲ್ಯ, ನಿಜ, ಮುತ್ತಾತನಿಗೆ ಮರಿಮಗನಲ್ಲಿ ಮತ್ತಾರಲ್ಲೂ ಇಲ್ಲದ ಪ್ರೇಮಾಭಿಮಾನಗಳು ಸಹಜವಷ್ಟೇ? 

ಶ್ರೀವಾದೀಂದ್ರರು ಶ್ರೀರಾಯರ ಮರಿಮಕ್ಕಳು. ರಾಯರ ಪುತ್ರರಾದ ಲಕ್ಷ್ಮೀನಾರಾಯಣಾಚಾರರಿಗೆ ಪುರುಷೋತ್ತಮಾಚಾರರು ಏಕೈಕ ಪುತ್ರರು. ಅವರ ಜೇಷ್ಠ ಪುತ್ರರೇ ಶ್ರೀನಿವಾಸಾಚಾರರು. ಇವರೇ ಮುಂದೆ ಶ್ರೀವಾದೀಂದ್ರತೀರ್ಥರೆಂಬ ಅಭಿಧಾನದಿಂದ ಶ್ರೀರಾಯರ ಭವಿಷ್ಯವನ್ನು ಸತ್ಯಮಾಡಲೋ ಎಂಬಂತೆ ಮಹಾಸಂಸ್ಥಾನಾಧಿಪತಿಗಳಾಗಿ ೧೭೨೮ರಿಂದ ೧೭೫೦ರವರೆಗೆ ವಿರಾಜಿಸಿದರು. ದಿವಾನ್ ವೆಂಕಣ್ಣ ಪಂತನು ರಾಯರಿಗಾಗಿ ಮೊದಲು ಒಂದು ಸುಂದರ ಬೃಂದಾವನವನ್ನು ತಯಾರುಮಾಡಿಸಿದ್ದು. ಅದಕ್ಕೆ ಅರ್ಹರಾದವರು ಮುಂದೆ ಬರುತ್ತಾರೆ, ನಮಗೆ ರಾಮಪಾದಸ್ಪರ್ಶಪಾವಿತ ಶಿಲೆಯಲ್ಲಿ ಬೇರೊಂದು ಬೃಂದಾವನ ಮಾಡಿಸುವಂತೆ ಹೇಳಿ, ಆ ಬೃಂದಾವನವನ್ನು ಶ್ರೀವಾದೀಂದ್ರರಿಗಾಗಿಯೇ ಕಾದಿರಿಸಲು ಆಜ್ಞಾಪಿಸಿದ್ದ ವಿಚಾರ ರಾಯರ ಚರಿತೆಯಲ್ಲಿ 472 ಈಗಾಗಲೇ ನಿರೂಪಿಸಲಾಗಿದೆ. ಆ ಬೃಂದಾವನವೇ ಮುಂದೆ ಶ್ರೀವಾದೀಂದ್ರರ ಬೃಂದಾವನವಾಗಿ ಅದ್ಯಾಪಿ ಮಂತ್ರಾಲಯದಲ್ಲಿ ಕಂಗೊಳಿಸುತ್ತದೆ.

ಶ್ರೀಗುರುರಾಜರು ಸಶರೀರವಾಗಿ ಬೃಂದಾವನ ಪ್ರವೇಶಮಾಡಿದಾಗ ಅವರ ಮರಿಮಕ್ಕಳಾದ ಶ್ರೀನಿವಾಸಾಚಾರರಿಗೆ (ವಾದೀಂದ್ರರಿಗೆ) ಕೇವಲ ಒಂದೂವರೆ ವರ್ಷ ಶಿಶುವಾಗಿದ್ದಾಗಲೇ ರಾಯರು ತಮ್ಮ ಮರಿಮಗನ ಮೇಲೆ ಅವರ ಸ್ವರೂಪ-ಯೋಗ್ಯತೆಯನ್ನರಿತವರಾಗಿದ್ದರಿಂದಲೇ, ತಮಗಿರುವ ಅಪಾರ ಪ್ರೀತಿ, ವಾತ್ಸಲ್ಯ, ಅನುಗ್ರಹಗಳನ್ನು ತಮಗಾಗಿ ಸಿದ್ಧವಾಗಿದ್ದ ಬೃಂದಾವನವನ್ನು ಮುಡುಪಾಗಿರಿಸುವ ಮೂಲಕ ಜನತೆಗೆ ವ್ಯಕ್ತಪಡಿಸಿದರೆಂದಮೇಲೆ ಶ್ರೀವಾದೀಂದ್ರರೆಂತಹ ಭಾಗ್ಯಶಾಲಿಗಳೆಂಬುದು ಸ್ಪಷ್ಟವಾಗುವುದು. 

ಶ್ರೀವಾದೀಂದ್ರತೀರ್ಥರು ಅಂದರೆ ಪೂರ್ವಾಶ್ರಮದ ಶ್ರೀನಿವಾಸಾಚಾರ್ಯರು ತಮ್ಮ ತಂದೆಗಳಾದ ಶ್ರೀ ಪುರುಷೋತ್ತಮಾ- ಚಾರದಲ್ಲಿ, ಅನಂತರ ಕಕ್ಕಂದಿರೂ ಕುಲಗುರುಗಳೂ ಆದ ಶ್ರೀಸುಮತೀಂದ್ರತೀರ್ಥರು ಮತ್ತು ಶ್ರೀಉಪೇಂದ್ರತೀರ್ಥರಲ್ಲಿ ಸಕಲಶಾಸ್ತ್ರಗಳನ್ನೂ ಅಧ್ಯಯನಮಾಡಿ ಶ್ರೀಮಠದಲ್ಲಿ ಜರುಗುತ್ತಿದ್ದ ಅನೇಕ ವಾಕ್ಯಾರ್ಥಗಳಲ್ಲಿ ಭಾಗವಹಿಸಿ ತಮ್ಮ ವಾದವೈಖರಿ, ಪ್ರತಿಭೆಗಳಿಂದ ಪ್ರತಿವಾದಿಗಳನ್ನು ನಿರುತ್ತರರನ್ನಾಗಿಸಿ ಗೌರವಾದರಗಳಿಗೆ ಪಾತ್ರರಾಗುತ್ತಿದ್ದರು. 

ಶ್ರೀನಿವಾಸಾಚಾರ್ಯರು ಮಧುರೆಯ ಪಾಂಡರಾಜರು, ತಂಜಾವೂರು, ಕರ್ನಾಟಕದ ಕೊನೆಕೊನೆಯ ರಾಜರುಗಳಿಂದ ಮಾನರಾಗಿದ್ದರು. ಪಾಂಡರಾಜನ ಮಂತ್ರಿಯೂ, ಮುಖ್ಯ ಸೇನಾನಿಯೂ ಆಗಿದ್ದ ಸಾಂಬಯಾರ್ಯನ (ಸಾಂಬಯ್ಯ) ಪ್ರಾರ್ಥನೆಯಂತೆ ಆರ್ವಾಚೀನ ಪರಮಪಂಡಿತರೊಬ್ಬರು ಶ್ರೀಮದಾಚಾರ್ಯರ ಸಿದ್ದಾಂತದಮೇಲೆ ಕುತ್ತಿತ ದೋಷಾಭಾಸಗಳನ್ನು ಹೊರಿಸಿ, ರಚಿಸಿದ್ದ ಗ್ರಂಥವನ್ನು ಶತಶಃ ಖಂಡಿಸಿ, ದೈತಭಾಷ್ಯವೇ ಶ್ರೀಬಾದರಾಯಣದೇವರಿಗೆ ಅಭಿಪ್ರೇತವಾದ (ಸಮ್ಮತವಾದ) ಭಾಷ್ಯ- ವೆಂಬುದನ್ನು ಸಿದ್ಧಾಂತಪಡಿಸಿ “ನವದುರುಕ್ತಿರಿಕ್ಷಾ” ಎಂಬ ಗ್ರಂಥವನ್ನು ರಚಿಸಿ ಸರ್ವಜ್ಞರ ಸೇವೆಮಾಡಿ ಪ್ರಬಂಧ ಪ್ರಣಯನ ಪ್ರವೀಣರೆಂದು ಕೀರ್ತಿಗಳಿಸಿದ್ದರು.173 ಶ್ರೀನಿವಾಸಾಚಾರರ ಪಾಂಡಿತ್ಯ-ಪ್ರತಿಭೆಗಳಿಂದ ಸಂತುಷ್ಟರಾದ ಪಾಂಡ್ಯದೇಶದ ರಾಜ, ಮತ್ತು ಮಂತ್ರಿ ಸಾಂಬಯಾರರು ಅವರನ್ನು ವಿದ್ವದ್ಯೋಗ್ಯರೀತಿಯಿಂದ ಸನ್ಮಾನಿಸಿದರು. 

ಶ್ರೀಉಪೇಂದ್ರತೀರ್ಥರು ಇವರ ಆಗಾಧವಿದ್ದತ್ತು, ಪ್ರತಿಭೆ, ಗ್ರಂಥರಚನಾ ಕೌಶಲ, ಮತ್ತು ಶ್ರೀಗುರುರಾಜರ ವಿಶೇಷಾನುಗ್ರಹ- ಪಾತ್ರರಾಗುವಿಕೆಯನ್ನು ಕಂಡು, ಶ್ರೀರಾಯರ ಸಂಕಲ್ಪವನ್ನು ಬಲ್ಲವರಾಗಿದ್ದುದರಿಂದ ಶ್ರೀನಿವಾಸಾಚಾರರಿಗೆ ಪರಮ ಹಂಸಾಶ್ರಮವಿತ್ತು ಅವರನ್ನು “ಶ್ರೀವಾದೀಂದ್ರತೀರ್ಥರು” ಎಂಬ ಹೆಸರಿನಿಂದ ದೈತಸಾಮ್ರಾಜ್ಯಾಧಿಪತಿಗಳನ್ನಾಗಿಮಾಡಿ ಪಟ್ಟಾಭಿಷೇಕ ಮಾಡಿ ಅನುಗ್ರಹಿಸಿದರು. 

ಪೀಠಾಧೀಶ್ವರರಾದ ಮೇಲೆ ವಾದೀಂದ್ರತೀರ್ಥರು ಜೈತ್ರಯಾತ್ರೆ ಕೈಕೊಂಡು ಎಲ್ಲಕಡೆ ಸಂಚಾರಮಾಡಿ ಪರವಾದಿದಿಗ್ವಿಜಯ, ಸಿದ್ಧಾಂತಸ್ಥಾಪನೆ, ಪಾಠಪ್ರವಚನ, ಶಿಷ್ಯಭಕ್ತಜನೋದ್ದಾರಾದಿಕಾರಗಳಿಂದ ಪ್ರಭಾವಿತರಾದ ಅನೇಕ ಹಿಂದೂ, ಮುಸ್ಲಿಂ ರಾಜರು, ಪಾಳೇಗಾರರು, ಜಹಗೀರದಾರರೇ ಮೊದಲಾದವರು ಶ್ರೀಯವರಿಗೆ ಗ್ರಾಮ, ಭೂಮಿ, ಧನಕನಕಾಭರಣಾದಿಗಳನ್ನು ಸಮರ್ಪಿಸಿ, ಅನುಗೃಹೀತರಾಗುತ್ತಿದ್ದರು. ಶ್ರೀವಾದೀಂದ್ರರು, ಶ್ರೀರಾಯರು ಸಂಪಾದಿಸಿದ್ದ ಕಿರೀಟಗಿರಿ, ಮತ್ತು ಮಂತ್ರಾಲಯ ಗ್ರಾಮಗಳನ್ನು ಶ್ರೀಮಠಕ್ಕೆ ಉಳಿಸಿಕೊಟ್ಟರು. ಶ್ರೀರಾಯರ ಅಗಮಮಹಿಮಾದ್ಯೋತಕಗಳಾದ ಇವೆರಡು ಗ್ರಾಮಗಳನ್ನು ಶಾಶ್ವತವಾಗಿ ಮಹಾಸಂಸ್ಥಾನಕ್ಕೆ ಉಳಿಸಿಕೊಟ್ಟ ಕೀರ್ತಿ ಶ್ರೀವಾದೀಂದ್ರರಿಗೆ ಸಲ್ಲುವುದು.

ಶ್ರೀವಾದೀಂದ್ರತೀರ್ಥರು ಅನೇಕ ಶ್ರೇಷ್ಠಗ್ರಂಥಗಳನ್ನು ರಚಿಸಿದ್ದಾರೆ. ಈಗ ದೊರಕಿರುವ ಗ್ರಂಥಗಳು ಹೀಗಿವೆ.

1. ತತ್ವ ಪ್ರಕಾಶಿಕಾಟಿಪ್ಪಣೀ (ಮೀಮಾಂಸಾ ನಯದರ್ಪಣ) 

2. ಭೂಗೋಳಖಗೋಳ ವಿಚಾರಃ 

3. ನವ್ಯದುರುಕ್ತಿಶಿಕ್ಷಾ (ಪೂರ್ವಾಶ್ರಮ) 

4. ಶ್ರೀರಾಘವೇಂದ್ರ ಮಠಗತಾರ್ಚಾಗತಿಕ್ರಮಃ 

5. ತತ್ತೋದ್ಯೋತಟಿಪ್ಪಣಿ 

6. ಶ್ರೀಗುರುಗುಣಸ್ತವನಮ್ – ಇತ್ಯಾದಿ

ಇದರಂತೆ ಗುರುಗಳು ಕನ್ನಡದಲ್ಲಿ ಅನೇಕ ದೇವರನಾಮಗಳನ್ನು ರಚಿಸಿ ಹರಿದಾಸವಾಹ್ಮಯಭಂಡಾರವನ್ನು ಶ್ರೀಮಂತ- ಗೊಳಿಸಿದ್ದಾರೆ. 

ಪ್ರಕೃತ, ಅವರ ಗ್ರಂಥಗಳಲ್ಲಿ ಕೊನೆಯದಾದ ಶ್ರೀಗುರುಗುಣಸ್ತವನವೇ ಈ ಕಥಾನಕದ ಮುಖ್ಯವಸ್ತುವಾಗಿದ್ದು, ಅದು ಶ್ರೀರಾಯರ ಮಹಿಮಾ ಪ್ರಕಟನೆಗೆ ಕಾರಣವಾದ ಕೃತಿಯಾಗಿದೆ. 

ಶ್ರೀಗುರುಸಾರ್ವಭೌಮರಲ್ಲಿ ವಾದೀಂದ್ರತೀರ್ಥರಿಗೆ ಅಪಾರ ಭಕ್ತಿ-ಶ್ರದ್ಧೆಗಳಿದ್ದವು. ಅಂತೆಯೇ ರಾಯರ ಅಗಾಧ ವ್ಯಕ್ತಿತ್ವ, ಮಹಿಮೆ, ಅವರ ಅಮರಚರಿತೆ, ರಾಯರ ಗ್ರಂಥಗಳ ಹಿರಿಮೆ-ಗರಿಮೆಗಳನ್ನು ಎತ್ತಿತೋರಲು ಅವರು, “ಶ್ರೀಗುರುಗುಣಸ್ತವನಮ್ ಎಂಬ ಅಪೂರ್ವಗ್ರಂಥವನ್ನು ರಚಿಸಿದ್ದಾರೆ. ಇದೊಂದು ಪುಟ್ಟ ಕಾವ್ಯ. ಇದರಲ್ಲಿ ಗುರುರಾಜರು ರಚಿಸಿದ ಗ್ರಂಥಗಳು, ಆ ಒಂದೊಂದು ಗ್ರಂಥಗಳನ್ನೂ ರಚಿಸಲು ಕಾರಣ, ಆ ಗ್ರಂಥಗಳ ಮಹತ್ವ, ಮಹಿಮೆಗಳನ್ನೂ, ಅವುಗಳಿಂದ ಅಪಂಡಿತಪಾಮರರು, ಮುಖ್ಯವಾಗಿ ಪಾಠಪ್ರವಚನಾಸಕ್ತರಿಗಾದ ಮಹೋಪಕಾರಗಳನ್ನು ವಾದೀಂದ್ರತೀರ್ಥರು ವಿದ್ವತ್ತೂರ್ಣವಾಗಿ ಬಹುಚಮತ್ಕಾರವಾಗಿ ವರ್ಣಿಸಿದ್ದಾರೆ. ಶ್ರೀವಾದೀಂದ್ರರು ತಾವು ರಚಿಸಿದ ಇಂಥ ಮಹತ್ವಪಾರ್ಣಗ್ರಂಥವನ್ನು ಶ್ರೀರಾಯರಿಗೆ ಸಮರ್ಪಿಸಲು ಮಹಾಸಂಸ್ಥಾನ- ದೊಡನೆ ಸಂಚಾರಕ್ರಮದಿಂದ ಮಂತ್ರಾಲಯಕ್ಕೆ ದಯಮಾಡಿಸಿದರು. 

ಆ ವೇಳೆಗೆ ರಾಯರ ಅನುಗ್ರಹ ಸಂಪಾದಿಸಲು ಸೇವೆಗಾಗಿ ನೂರಾರು ಜನರು ಬಂದು ಸೇವಾ ಮಾಡುತ್ತಿದ್ದರು. ಶ್ರೀಯರೊಡನೆ ನೂರಾರು ಜನ ಪಂಡಿತ ವಿದ್ಯಾರ್ಥಿ ಪರಿವಾರದವರೂ ಬಂದಿದ್ದು ಶ್ರೀರಾಯರ ಆಲಯವು ಜನನಿಬಿಡಿತವಾಗಿತ್ತು. ಶ್ರೀವಾದೀಂದ್ರರು ಶ್ರೀರಾಯರ ಬೃಂದಾವನ ಸನ್ನಿಧಿಯಲ್ಲೇ ಅಂದು ಶ್ರೀಮೂಲರಾಮದೇವರ ಪೂಜಾರಾಧನೆಮಾಡಿ ರಾಯರಿಗೆ ಹಸ್ತೋದಕವನ್ನು ಸಮರ್ಪಿಸಿ, ಮಹಾಮಂಗಳಾರತಿ ಬೆಳಗಿದರು. 

ಅನಂತರ ಶ್ರೀವಾದೀಂದ್ರ ತೀರ್ಥರು ತಾವು ರಚಿಸಿದ “ಶ್ರೀಗುರುಗುಣಸ್ತವನ” ಕಾವ್ಯವನ್ನು ಶ್ರೀರಾಯರ ಬೃಂದಾವನದ ಮುಂದೆ ನಿಂತು. ಭಕ್ತಿಪ್ರಕರ್ಷದಿಂದ ಸುಸ್ವರವಾಗಿ ಓದಲಾರಂಭಿಸಿದರು. ನೂರಾರುಜನ ಪಂಡಿತ-ವಿದ್ಯಾರ್ಥಿಗಳು. ಭಕ್ತರು ಶ್ರೀವಾದೀಂದ್ರ ಗುರುಗಳ ಮುಖದಿಂದ ಹೊರಹೊಮ್ಮುತ್ತಿದ್ದ ಶ್ರೀಗುರುಮಹಿಮಾಮೃತವನ್ನು ಪಾನಮಾಡಿ ಆನಂದಿಸುತ್ತಿದ್ದಾರೆ. ವಾದೀಂದ್ರರು ಕಾವ್ಯದ ಕೊನೆಯ ಪದ್ಯವಾದ “ವ್ಯಾಸೇನು ಪ್ತಬೀಜ” ಎಂಬ ಪದ್ಯವನ್ನು ಓದುತ್ತಾ “...ಅದ್ಯ ಶ್ರೀರಾಘವೇಂದ್ರಾದ್ವಿಲಸತಿ ಫಲಿತೋ ಮಧ್ವಸಿದ್ದಾಂತ ಶಾಖೀ” ಎಂದು ಕೊನೆಯ ಚರಣವನ್ನು ಓದುತ್ತಿರುವಾಗ ಅಲ್ಲೊಂದು ಅದ್ಭುತಪವಾಡವು ನಡೆದು ಹೋಯಿತು! ಶ್ರೀವಾದೀಂದ್ರರು ರಚಿಸಿ ಸಮರ್ಪಿಸಿದ ಶ್ರೀಗುರುಗುಣಸ್ತವನವನ್ನಾಲಿಸಿ ಸಂತೋಷದಿಂದ ಶಿರಕಂಪನಮಾಡುವಂತೆ ಕ್ಷಣಕಾಲ ಶ್ರೀಗುರುರಾಜರ ಬೃಂದಾವನವು ಅಲುಗಾಡಿತು! ಬೃಂದಾವನಕ್ಕೆ ಸಮರ್ಪಿಸಿದ್ದ ವಿವಿಧ ಕುಸುಮಗಳು ಪುಷ್ಪಮಾಲಿಕೆಯೂ ಶ್ರೀವಾದೀಂದ್ರರ ಶಿರಸ್ಸಿನ ಮೇಲೆ ಪುಷ್ಪವೃಷ್ಟಿಯಾದಂತೆ ಪಳ ಪಳನೆ ಕಳಚಿಬಿದ್ದವು!

“ಅಪೂರ್ವ, ಅದ್ಭುತ, ಅಸಾಧಾರಣ!” ಎಂದು ಅಲ್ಲಿನೆರೆದಿದವರು ಹೀಗೆ ಉದ್ಧಾರ ತೆಗೆದರು! ಪಂಡಿತರು ಪಾಮರರು ಭಕ್ತರು ಎಲ್ಲರೂ ಆ ಪರಮಾಶ್ಚರಕರಘಟನೆ, ಶ್ರೀರಾಯರ ಮಹಿಮೆಗಳನ್ನು ಕಣ್ಣಾರೆ ಕಂಡು ಹರ್ಷನಿರ್ಭರರಾಗಿ ರಾಜಾಧಿರಾಜ ಗುರುಸಾರ್ವಭೌಮ ಗೋವಿಂದಾ ಗೋವಿಂದಾ, ಶ್ರೀವಾದೀಂದ್ರಗುರುರಾಜರಿಗೆ ಜಯವಾಗಲಿ” ಎಂದು ಏಕಕಂಠದಿಂದ ಜಯಘೋಷ ಮಾಡಿದರು, ಶ್ರೀವಾದೀಂದ್ರರ ಕಣ್ಣುಗಳಿಂದ ಆನಂದಸಲಿಲದ ಮಹಾಪೂರವೇ ಹರಿಯಹತ್ತಿತು. ತಮ್ಮ ಗ್ರಂಥವನ್ನು ಮೆಚ್ಚಿ ತಲೆದೂಗಿ ಹರಸಿದರೆಂದು ಅನಿರ್ವಚನೀಯಾನಂದದಿಂದ ರಾಯರ ಬೃಂದಾವನವನ್ನು ತಬ್ಬಿಕೊಂಡು ಭಕ್ತತಿಶಯದಿಂದ ಮಕ್ಕಳಂತೆ ಗಳಗಳನೆ ಅತ್ತುಬಿಟ್ಟರು! ಅನಂತರ ಸಾಷ್ಟಾಂಗಪ್ರಣಾಮಮಾಡಿ, ಗ್ರಂಥವನ್ನು ಗುರುರಾಜರಿಗೆ ಅರ್ಪಿಸಿ, ಮಂಗಳಾರತಿ ಮಾಡಿದರು. 

ಅಲ್ಲಿ ಸಮಾವೇಶಗೊಂಡಿದ್ದ ಪಂಡಿತರು-ಧಾರ್ಮಿಕರು-ಭಕ್ತಜನರು, ಶ್ರೀಗುರುರಾಜರಿಗೆ ತಮ್ಮ ಮರಿಮಕ್ಕಳಾದ ಶ್ರೀವಾದೀಂದ್ರರಲ್ಲಿರುವ ಪ್ರೇಮಾತಿಶಯ ಅನುಗ್ರಹ, ಅವರಮೇಲೆರಚಿಸಿದ ಗುರುಗುಣಸ್ತವನ'ಕ್ಕೆ ಬೃಂದಾವನವೇ ಅಲುಗಾಡಿ ಸಮ್ಮತಿ-ಸಂತೋಷಗಳನ್ನು ಸೂಚಿಸಿದ ಬಗೆಗಳನ್ನು ಕಂಡು ಅನಂದದಿಂದ ರಾಯರ ಮಹಿಮೆಯನ್ನೂ, ಅವರ ಮಹಾನುಗ್ರಹಕ್ಕೆ ಭಾಗಿಗಳಾದ ವಾದೀಂದ್ರತೀರ್ಥರ ಭಾಗ್ಯ, ಮಹತ್ವಗಳನ್ನು ಮನಮುಟ್ಟಿ ಬಣ್ಣಿಸಿ ಕೊಂಡಾಡಿದರು. 

ಇಂತಹ ಮಹಿಮಾ ಪ್ರದರ್ಶನಕ್ಕೆ ಕಾರಣರಾದ ಶ್ರೀರಾಯರ, ಅಮರಗ್ರಂಥಗಳ ಮಹತ್ವವನ್ನು ತಿಳಿಸಿಕೊಡುವ “ಶ್ರೀಗುರುಗುಣಸ್ತವನ'ವು ಶ್ರೇಷ್ಠಗ್ರಂಥವೆಂದು ಪಂಡಿತಮಂಡಲಿಯಲ್ಲಿ ಮಾನ್ಯತೆ ಗಳಿಸಿ, ಪಾಠ-ಪ್ರವಚನಗಳಿಂದ ಪ್ರಖ್ಯಾತವಾಯಿತು. 

ಶ್ರೀಅಪ್ಪಣ್ಣಾಚಾರ್ಯರ “ಗುರುಸ್ತೋತ್ರ'ಕ್ಕೆ 'ಸಾಕ್ಷೀಹಯಾಸ್ರೋಹಿ' ಎಂಬ ತಮ್ಮ ದಿವ್ಯವಾಣಿಯಿಂದ ಮೆಚ್ಚಿ ಅಪ್ಪಣೆಕೊಡಿಸಿ ತಾವು ಸಶರೀರರಾಗಿ ಬೃಂದಾವನ ಪ್ರವೇಶಮಾಡಿದ ತರುವಾಯ ಪ್ರಪ್ರಥಮ ಮಹಿಮೆಯನ್ನು ತೋರಿದ ಮೇಲೆ ರಾಯರ ಅನೇಕ ಮಹಿಮೆಗಳು ಪ್ರಕಾಶಕ್ಕೆ ಬಂದಿರುತ್ತವೆ. ಆದರೆ ಆ ತರುವಾಯ ಶ್ರೀರಾಯರು ತೋರಿದ ಮಹಿಮೆಗಳಲ್ಲಿ ಶ್ರೀವಾದೀಂದ್ರರ “ಶ್ರೀಗುರುಗುಣಸ್ತವನ'ವನ್ನು ಮೆಚ್ಚಿ ಬೃಂದಾವನಸ್ಥರಾದ ಗುರುರಾಜರು ತಲೆದೂಗಿ ಪ್ರದರ್ಶಿಸಿದ ಈ ಮಹಿಮೆ ಅಸಾಧಾರಣವಾದ ಪವಾಡವೆಂದು ಹೇಳಬಹುದು. 

ಮುಂದೆ ಶ್ರೀವಾದೀಂದ್ರರು ಶ್ರೀಗುರುರಾಜರ ಆಜ್ಞೆಯಂತೆ ಮಂತ್ರಾಲಯದಲ್ಲೇ ತಮ್ಮ ಪಾರ್ಥಿವ ಶರೀರವನ್ನು ತ್ಯಜಿಸಿ ರಾಯರ ಬೃಂದಾವನ ಮಗ್ಗುಲಿನಲ್ಲಿ ತಮಗಾಗಿಯೇ ರಾಯರು ಕಾದಿರಿಸಿದ್ದ ಸುಂದರ ಬೃಂದಾವನಾಂತರ್ಗತರಾಗಿ ಕೀರ್ತಿ ಶರೀರದಿಂದ ವಿರಾಜಿಸಿ, ಭಕ್ತರನ್ನು ಅದ್ಯಾಪಿ ಅನುಗ್ರಹಿಸುತ್ತಿದ್ದಾರೆ. ಶ್ರೀಗುರುರಾಜರ ಸನ್ನಿಧಿಯಲ್ಲಿ ಸ್ಥಾನದೊರಕುವುದೊಂದು ಮಹಾಭಾಗ್ಯ, ಅವರು ಅನುಗ್ರಹಿಸಿದರೆ ಮಾತ್ರ ಸಾಧ್ಯವೆಂದರೆ ತಪ್ಪಾಗಲಾರದು. ಶ್ರೀರಾಯರ ಪಕ್ಕದಲ್ಲಿ ವಿರಾಜಿಸಿರುವ ಶ್ರೀವಾದೀಂದ್ರತೀರ್ಥಗುರುಚರಣರ ಮಹಿಮೆಗೆ ಈ ಒಂದು ಉದಾಹರಣೆಯೇ ಸಾಕಲ್ಲವೇ ? 

ಶ್ರೀಗುರುರಾಜರ ಗ್ರಂಥರಚನೆ ಭಾಗದಲ್ಲಿ ಶ್ರೀಸುಮತೀಂದ್ರತೀರ್ಥರು ಮಂತ್ರಿಗಳಾಗಿದ್ದಂತೆ ದಾಸ ಸಾಹಿತ್ಯ ಪ್ರಪಂಚದ ಅಭ್ಯುದಯ ಭಾಗದಲ್ಲಿ ಜಗನ್ನಾಥದಾಸರು ಮಂತ್ರಿಗಳಾದಂತೆ, ಬೃಂದಾವನ ಮಹಿಮಾವಿಚಾರದಲ್ಲಿ ಶ್ರೀವಾದೀಂದ್ರತೀರ್ಥರು ಶ್ರೀಗುರುರಾಜರಿಗೆ ಮಂತ್ರಿಗಳಾದರು! ಇಂದಿಗೂ ಭಕ್ತಜನರಿಗೆ ಸ್ವಪ್ನದಲ್ಲಿ ಶ್ರೀವಾದಿಂದ್ರ ಸಹಕೃತರಾಗಿಯೇ ಶ್ರೀರಾಯರು ದರ್ಶನವಿತ್ತು. ಅವರವರ ಮನೋಭೀಷ್ಟಗಳನ್ನು ಪೂರೈಸುತ್ತಿರುವರೆಂದಮೇಲೆ ಶ್ರೀವಾದೀಂದ್ರತೀರ್ಥಗುರುಚರಣರ ಮಹಿಮೆಗೆ ಇನ್ನು ಹೆಚ್ಚು ವಿವರಣೆಯು ಬೇಕಾಗಿಲ್ಲವೆಂದು ಘಂಟಾಘೋಷವಾಗಿ ಹೇಳಬಹುದು. ಶ್ರೀವಾದೀಂದ್ರರನ್ನು ಬೃಹಸ್ಪತ್ಯಾಚಾರರ ಅವತಾರವೆಂದು ಶ್ರೀವಿಜಯದಾಸರು ಕೊಂಡಾಡಿದ್ದಾರೆ. 

471 ಶ್ರೀಯೋಗೀಂದ್ರ-ಸೂರೀಂದ್ರ-ಸುಮತೀಂದ್ರ-ಉಪೇಂದ್ರತೀರ್ಥರು ಶ್ರೇಷ್ಠ ಗ್ರಂಥಕಾರರು ಅಸಾಧಾರಣ ಪ್ರತಿಭಾನ್ವಿತ ಪಂಡಿತರು. ಇವರಲ್ಲಿ ಶ್ರೀಸುಮತೀಂದ್ರ- ತೀರ್ಥರು ಅಸಾಧಾರಣ ಗ್ರಂಥಕಾರರು. ಶ್ರೀಗುರುರಾಜರು ಇವರಿಗಾಗಿಯೇ ಕೆಲಗ್ರಂಥಗಳನ್ನು ಉಡುಪಿಯಲ್ಲಿ ರಚಿಸಿದ್ದರು. ಶ್ರೀಗುರುರಾಜರಂತೆ ಸುಮತೀಂದ್ರರೂ ಪ್ರಸ್ಥಾನತ್ರಯದಲ್ಲಿ ಅದ್ವಿತೀಯ ಗ್ರಂಥರಚನೆಮಾಡಿ ಜಗದ್ವಿಖ್ಯಾತರಾದರು. ಮಾತ್ರವಲ್ಲ, ಅವರ ಸಾಹಿತ್ಯಕೃತಿಗಳು ಸಂಸ ತ ವಾಹ್ಮಯ ಭಂಡಾರದ ಅನರ್ಥ್ಯರತ್ನಗಳಾಗಿವೆ. ಶಿವಾಜಿಮಹಾರಾಜನ ಮೊಮ್ಮಗ ಶಾಹುಮಹಾರಾಜನ ಗುರುಗಳಾಗಿದ್ದ ಇವರು ರಾಜಾಧಿರಾಜರಿಂದ ಮಾನ್ಯರಾದರು. ಇವರೆಲ್ಲರ ಚರಿತೆ ಅನುಪಮ ಇಲ್ಲಿ ಅದನ್ನು ಗ್ರಂಥವಿಸ್ತಾರಭಯದಿಂದ ಬರೆಯಲಾಗಲಿಲ್ಲ. ಶ್ರೀರಾಯರ ದಯವಿದ್ದಲ್ಲಿ ಶ್ರೀಸುಮತೀಂದ್ರತೀರ್ಥರ ಮೇಲೆಯೇ ಒಂದು ಬೃಹದ್ಗಂಥವನ್ನು ರಚಿಸುವ ಅಭಿಲಾಷೆಯಿದೆ. ಗುರುಗಳು ನಮ್ಮಾಸೆ ಪೂರೈಸಲೆಂದು ಪ್ರಾರ್ಥಿಸೋಣ.

472 ಕಲಿಯುಗ ಕಲ್ಪತರು ೫ನೇ ಉಲ್ಲಾಸದ “ಆಶ್ರಮಪ್ರದಾನ” ಎಂಬ ೧೨ನೆಯ ಅಧ್ಯಾಯವನ್ನು ನೋಡಿರಿ. – ಗ್ರಂಥಕರ್ತಾ