Conflict of Devotion and Cruelty

|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ - ಕಲ್ಪತರು

ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು

ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು

೧೨. ಭಕ್ತಿ-ಕ್ರೌರ್ಯಗಳ ಸೆಣೆಸಾಟ

ಭಕ್ತಿ-ಕ್ರೌರ್ಯಗಳ ಸೆಣೆಸಾಟ

ದೈತ್ಯೇಂದ್ರನೂ ಜನಕನೂ ಆದ ಹಿರಣ್ಯಕಶ್ಯಪನನ್ನು ಕಂಡೊಡನೆಯೇ ಪ್ರಹ್ಲಾದರಾಜನು ವಿನೀತನಾಗಿ ಪಿತನಿಗೆ ನಮಸ್ಕರಿಸಿ ಕರಜೋಡಿಸಿ ನಿಂತನು. ಅದನ್ನು ಕಂಡು ಹಿರಣ್ಯಕಶ್ಯಪನಿಗೆ ಅತ್ಯಂತ ಹರ್ಷವಾಯಿತು, ಪ್ರೇಮ-ವಾತ್ಸಲ್ಯಗಳಿಂದ ಕುಮಾರನ ಮೈಮೇಲೆ ಕೈಯಾಡಿಸಿ ಮಗನನ್ನು ಆಲಂಗಿಸಿಕೊಂಡು ಆಶೀರ್ವದಿಸಿ ಮುದಗೊಂಡು “ವತ್ಸ! ನಿನಗೆ ನಿಮ್ಮ ಗುರುಗಳು ಈ ಒಂದು ಅವಧಿಯಲ್ಲಿ ಬಹು ವಿಚಾರಗಳನ್ನು ಕಲಿಸಿರಬೇಕಲ್ಲವೇ? ಎಲ್ಲಿ ಪ್ರಹ್ಲಾದ! ಅವರು ನಿನಗೆ ಕಲಿಸಿರುವುದರಲ್ಲಿ ಉತ್ತಮವಾದುದನ್ನು ಅನುವಾದ ಮಾಡು” ಎಂದನು.

ಪ್ರಹ್ಲಾದನು ತಂದೆಯ ಅಪ್ಪಣೆಯನ್ನಾಲಿಸಿ ಸಂತೋಷದಿಂದ ಹೇಳಲಾರಂಭಿಸಿದನು.

ಪ್ರಹ್ಲಾದ : ಶ್ರವಣಂ ಕೀರ್ತನಂ ವಿಷ್ಟೋ ಸ್ಮರಣಂ ಪಾದಸೇವನಂ |

ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮನಿವೇದನಮ್ ||

ಇತಿ ಪುಂಸಾರ್ಪಿತಾ ವಿಷ್ಣುಭಕ್ತಿಶ್ಚನ್ನವಲಕ್ಷಣಾ |

ಕ್ರಿಯತೇ ಭಗವತ್ಯಾ ತನ್ಮಧೀತಮುತ್ತಮಮ್ ||

“ತಂದೆಯೇ, ಶ್ರೀವಿಷ್ಣುವಿನ ಮಹಿಮೆಗಳನ್ನು ಕೇಳುವುದು, ಶ್ರೀಹರಿಯ ನಾಮ ಮತ್ತು ಕಲ್ಯಾಣಗುಣಗಳನ್ನು ಸಂಕೀರ್ತನ ಮಾಡುವುದು, ಮತ್ತೆ ಅದನ್ನು ಅನುಸಂಧಾನಕ್ಕೆ ತಂದುಕೊಳ್ಳುವುದು, ಭಗವಂತನನ್ನೂ ಮತ್ತು ಭಗವದ್ಭಕ್ತರನ್ನೂ ಸೇವಿಸುವುದು, ತುಳಸೀಪುಷ್ಪಾದಿಗಳಿಂದ ಪರಮಾತ್ಮನನ್ನು ಅರ್ಚಿಸುವುದು, ಬಾರಿಬಾರಿಗೂ ಶ್ರೀಹರಿಗೆ ನಮಸ್ಕಾರ ಮಾಡುವುದು ಅಥವಾ ಸ್ತೋತ್ರ ಮಾಡುವುದು, ನಾನು ಶ್ರೀಹರಿಪರಮಾತ್ಮನ ದಾಸ ಎಂಬ ಅನುಸಂಧಾನ, ಭಗವಂತನಲ್ಲಿ ಅತ್ಯಂತ ಭಕ್ತಿ ಮಾಡುವುದು,

ಅಂದರೆ ಶ್ರೀಹರಿಯು ನಮ್ಮನ್ನು ಕಾಪಾಡುವನೆಂಬ ವಿಶ್ವಾಸ (ಸಹ), ಪರಮಾತ್ಮನು ನಮ್ಮಲ್ಲಿ ಮತ್ತು ಮುಕ್ತರಲ್ಲೂ ಸಹ ನಿಯಮನ ಮಾಡಲು ಅಂತರ್ಯಾಮಿಯಾಗಿದ್ದಾನೆ ಎಂಬ ದೃಢವಾದ ಜ್ಞಾನ (ಆತ್ಮನಿವೇದನ) - ಹೀಗೆ ಪೋಷಕವಾದ ನವವಿಧಭಕ್ತಿಯು ಯಾವ ಶಾಸ್ತಾಧ್ಯಯನದಿಂದ ಜನಿಸುವುದೋ, ಆ ಉತ್ತಮವಾದ ಶಾಸ್ತ್ರಾಭ್ಯಾಸವೇ ಜ್ಞಾನಸಾಧನವೆಂದು, ಉತ್ತಮವಾದ ವಿದ್ಯೆಯೆಂದು ನಾನು ತಿಳಿದಿದ್ದೇನೆ.

ಹೀಗೆ ಹೇಳಿದ ಪ್ರಹ್ಲಾದನ ಮಾತನ್ನು ಕೇಳಿ ಹಿರಣ್ಯಕಶ್ಯಪನಿಗೆ ಅತಿಯಾದ ಕೋಪವುಂಟಾಯಿತು. ಕೋಪದಿಂದ ತುಟಿಗಳು ಕಂಪಿಸುತ್ತಿರಲು ಆಚಾರ್ಯ ಶಂಡರತ್ತ ಕ್ರೂರದೃಷ್ಟಿ ಬೀರಿ “ಎಲವೆಲವೋ ಬ್ರಾಹ್ಮಣಾಧಮ! ನನ್ನೀಪುತ್ರನು ಶತ್ರುವಾದ ವಿಷ್ಣುವಿನ ಪಕ್ಷವನ್ನು ಆಶ್ರಯಿಸಿದ್ದಾನೆ. ನೀವೇ ನನ್ನ ಆಜ್ಞೆಯನ್ನು ಲಕ್ಷಿಸದೆ ಪ್ರಹ್ಲಾದನಿಗೆ ಅಸಾರವಾದುದನ್ನು ಉಪದೇಶಿಸಿರುವಿರಿ! ಗುರುಪುತ್ರರೆಂದು ಈವರೆಗೆ ನಾನು ನಿಮ್ಮನ್ನು ಬಹುಮಾನದಿಂದ ಕಾಣುತ್ತಿದ್ದೆ. ಈಗ ಗೊತ್ತಾಯಿತು. ನೀವು ವೇಷಧಾರಿಗಳಾದ ವಿರುದ್ಧ ಪಕ್ಷದವರು! ಹಿಂದೆ ಮಾಡಿದ ಪಾಪದ ಫಲವಾಗಿ ರೋಗವು ಹುಟ್ಟುವಂತೆ ಕಾಲಬಂದಾಗ ಶತ್ರುಗಳ ದ್ರೋಹವು ವ್ಯಕ್ತವಾಗುವುದು. ಗುರುಗಳಾಗಿದ್ದರೂ ಕಾರ್ಯಾಕಾರ್ಯ ವಿವೇಕರಹಿತರಾಗಿ ಸೊಕ್ಕಿನಿಂದ ವರ್ತಿಸಿರುವ ನೀವು ಶಿಕ್ಷೆಗೆ ಅರ್ಹರಾಗಿರುವಿರಿ!” ಎಂದು ತೀಕ್ಷ್ಯವಚನಗಳಿಂದ ಶಂಡಾಮರ್ಕರನ್ನು ಹಳಿದನು.

ದೈತ್ಯರಾಜನ ಕಟುವಾಕ್ಯಗಳಿಂದ ಶಂಡಾಚಾರ್ಯರು ವಿಕಾರ ಹೊಂದದೆ ವಿಜ್ಞಾಪಿಸಿದರು. “ದೈತ್ಯೇಂದ್ರ! ನಾನಾಗಲಿ ಇನ್ಯಾರೇ ಆಗಲಿ ಉಪದೇಶಿಸಿದ್ದರಿಂದ ನಿನ್ನ ಕುಮಾರನ ಬುದ್ಧಿಯು ಕೆಟ್ಟಿಲ್ಲ! ಅದು ಅವನಿಗೆ ಸ್ವಾಭಾವಿಕವಾಗಿದೆ! ನೀನಿಂತು ಕೋಪಿಸುವುದು ಸರಿಯಲ್ಲ. ರಾಜನ್, ನೀನು ಹೇಳಿದಂತೆ ನಾನು ಛದ್ಮವೇಷ ಧರಿಸಿದ ಪ್ರತಿಪಕ್ಷದವನಾಗಿದ್ದಲ್ಲಿ ನಾನು ಬ್ರಹ್ಮಜ್ಞಾನಿಯಾಗಿರಲು ಸಾಧ್ಯವೇ ? ನನ್ನ ಮೇಲೆ ದೋಷ ಹೊರಿಸಿ ಕೋಪಗೊಳ್ಳಬೇಡ.”

ಆಗ ಹಿರಣ್ಯಕಶ್ಯಪನು ಪ್ರಹ್ಲಾದನನ್ನು ನೋಡಿ “ಪ್ರಹ್ಲಾದ! ಈ ಗುರುಗಳ ಉಪದೇಶದಿಂದ ನಿನ್ನ ಬುದ್ಧಿಯು ಕೆಟ್ಟಿಲ್ಲವೆಂದು ಅವರ ಮಾತಿನಿಂದ ವ್ಯಕ್ತವಾಗುತ್ತದೆ. ಹಾಗಿದ್ದರೆ ನಿನಗೀ ದುರ್ಬುದ್ಧಿಯು ಯಾರಿಂದುಂಟಾಯಿತು?” ಎಂದು ಪ್ರಶ್ನಿಸಲು ಪ್ರಹ್ಲಾದ ಹೀಗೆ ಹೇಳಿದನು - ತಂದೆಯೇ, ನನ್ನ ಬುದ್ಧಿಯು ಕೆಟ್ಟಿಲ್ಲ! ನಿನ್ನ ಬುದ್ದಿಯೇ ದುಷ್ಟವಾದುದು. ಭಗವಂತನಾದ ಹರಿಯಲ್ಲಿ ಮನಸ್ಸು ರಮಿಸಬೇಕಾದರೆ ಸ್ವ-ಪರ ಪ್ರಯತ್ನಗಳೇನೂ ಬೇಕಾಗಿಲ್ಲ. ದಿನದಿನವೂ ವಿಷಯೋಪಭೋಗಗಳಲ್ಲಿಯೇ ಮಗ್ನರಾಗಿ ಮನಬಂದಂತೆ ಪತ್ನಿ-ಪುತ್ರಾದಿ ಕುಟುಂಬಭರಣದಲ್ಲಿ ಕರ್ತೃತ್ವಾಭಿಮಾನವುಳ್ಳ ನಿಮ್ಮಂತಹ ಆಸುರಪಕ್ಷಾವಲಂಬಿಗಳಿಗೆ ಶ್ರೀಕೃಷ್ಣನಲ್ಲಿ ಭಕ್ತಿಯುಂಟಾಗುವುದಾದರೂ ಹೇಗೆ ಸಾಧ್ಯ? ಶಾಶ್ವತ ಸುಖವನ್ನು ಪಡೆಯಬೇಕಾದರೆ - ಜ್ಞಾನಿಗಳೂ, ಸಂಸಾರದಲ್ಲಿ ಅಸಾರಬುದ್ಧಿಯುಳ್ಳವರೂ, ನಿಂಚನರೂ, ಭಗವದ್ಭಕ್ತರೂ ಆದ ಸನ್ಯಾಸಿ ಮುಂತಾದ ಸಜ್ಜನರ ಸೇವೆ ಮಾಡಬೇಕು. ಅದಿಲ್ಲದೆ ಪರಮಪುರುಷಾರ್ಥವಾದ ಸಂಸಾರ ನಿವೃತ್ತಿಗೆ (ಮೋಕ್ಷಕ್ಕೆ) ಕಾರಣನಾದ ಶ್ರೀಹರಿ ಪರಮಾತ್ಮನು ಖಂಡಿತ ಲಭಿಸಲಾರನು.37 ಇಂತು ಕಂತುಜನಕನ ಏಕಾಂತ ಭಕ್ತನಾದ ಪ್ರಹ್ಲಾದನು ಹೇಳಿದೊಡನೆಯೇ ಹಿರಣ್ಯಕಶ್ಯಪನ ಕೋಪ ಅಧಿಕವಾಯಿತು. ಆಗವನು ಕಣ್ಣು ಕೆಂಪಗೆ ಮಾಡಿಕೊಂಡು ಆವರೆಗೂ ತನ್ನ ತೊಡೆಯ ಮೇಲೆ ಕೂಡಿಸಿಕೊಂಡಿದ್ದ ಮಗನನ್ನು ಕೆಳಗೆ ತಳ್ಳಿ ಸಿಟ್ಟಿನಿಂದ “ಈ ದುಷ್ಟನು ತನ್ನ ಚಿಕ್ಕಪ್ಪನನ್ನು ಸಂಹರಿಸಿದ ಅಧಮನಾದ ಹರಿಯ ದಾಸನಾಗಿ ಅವನನ್ನು ಸೇವಿಸುತ್ತಿದ್ದಾನೆ. ಸಾಮಾನ್ಯವಾಗಿ ಸಣ್ಣಮಕ್ಕಳಿಗೆ ತಂದೆ-ತಾಯಿಗಳಲ್ಲಿ ಬಿಡಲಾಗದ ಪ್ರೀತಿಯಿಂದಿರುವುದು ಕಂಡುಬಂದಿದೆ. ಇವನಾದರೂ ತಂದೆ-ತಾಯಿಗಳ ಮೇಲಿನ ಪ್ರೇಮವನ್ನೇ ತೊರೆದಿದ್ದಾನೆ! ಶತ್ರುವಾಗಿದ್ದರೂ ದ್ವೇಷದಿಂದ ಹಿತವನ್ನಾದರೂ ಮಾಡುತ್ತಿದ್ದಲ್ಲಿ ಅಂಥವನನ್ನು ಪುತ್ರನೆಂದು ತಿಳಿಯಬಹುದು. ಆದರೆ ದೇಹದಿಂದ ಜನಿಸಿದ ಮಗನು ಅಪಕಾರಿಯಾಗಿದ್ದಲ್ಲಿ ಅಂಥವನನ್ನು ಬಾಲ್ಯದಲ್ಲಿಯೇ ಸಂಹರಿಸಿಬಿಡಬೇಕು. ದೇಹದ ಒಂದು ಅಂಗವು ಕೆಟ್ಟಿದ್ದರೆ ಅದನ್ನು ಕಡಿದು ಹಾಕಿದರೆ ಉಳಿದ ಅವಯವಗಳು ಸುರಕ್ಷಿತವಾಗಿ ಉಳಿಯುವಂತೆ ಈ ದುರ್ಬುದ್ಧಿಯ ಪತ್ರನಾದ ಪ್ರಹ್ಲಾದನನ್ನು ಸಂಹರಿಸುವುದರಿಂದ ದೈತ್ಯಕುಲವು ಅಭಿವೃದಿಸುವುದು. ಇವನು ನಮಗೆ ಸ್ವಭಾವಶತ್ರುವಾಗಿದ್ದಾನೆ. ಆದ್ದರಿಂದ ಇವನನ್ನು ಎಲ್ಲ ಉಪಾಯಗಳಿಂದಲೂ ಸಂಹರಿಸಿರಿ” ಎಂದು ದೈತ್ಯಪೀರರಿಗೆ ಆಜ್ಞಾಪಿಸಿದನು.38

ದೈತ್ಯಚಕ್ರವರ್ತಿಯು ಹೀಗೆ ಹೇಳಿದ ಕೂಡಲೇ ಭಯಂಕರ ರೂಪ, ಕೋರೆಹಲ್ಲು ಕೆಂಬಣ್ಣದ ಮೀಸೆ-ದಾಡಿಗಳಿಂದ ಯುಕ್ತರಾದ ರಾಜಭಟರಾದ ದೈತ್ಯರು ಪ್ರಹ್ಲಾದನನ್ನು ನೆಲದ ಮೇಲೆ ಕೆಡವಿ “ಕೊಲ್ಲಿರಿ, ಕೊಲ್ಲಿರಿ” ಎಂದು ಭಯಂಕರ ಧ್ವನಿಗೈಯುತ್ತಾ ಬಾಲಕನಾದ ಪ್ರಹ್ಲಾದಕುಮಾರನ ಮರ್ಮಸ್ಥಾನಗಳನ್ನು ಈಟಿ, ಶೂಲಗಳಿಂದ ತಿವಿಯಹತ್ತಿದರು. ಆದರೆ ಅದೃಶ್ಯನೂ, ಗುಣಪೂರ್ಣನೂ, ಪರಾತ್ಪರನೂ ಆದ ಶ್ರೀಹರಿಯ ಪಾದಕಮಲಗಳಲ್ಲಿಯೇ ಮನಸ್ಸನ್ನು ನಿಲ್ಲಿಸಿ ಧ್ಯಾನಸಕ್ತನಾದ ಪ್ರಹ್ಲಾದನಿಗೆ ಬಾಹ್ಯವ್ಯಾಪಾರಗಳಲ್ಲಿ ಗಮನವೇ ಇರಲಿಲ್ಲ. ದೈತ್ಯರು ಪ್ರಹ್ಲಾದನನ್ನು ಸಂಹರಿಸಲು ಮಾಡಿದ ಎಲ್ಲ ಪ್ರಯತ್ನಗಳೂ ಪಾತಕಿಯು ಮಾಡಿದ ಪುಣ್ಯಕರ್ಮದಂತೆ ನಿಷ್ಪಲವಾದವು! ಸರ್ವಜಗತ್ತನ್ನೂ ರಕ್ಷಿಸುವ ಪ್ರಭು ಶ್ರೀಹರಿಯ ಅನುಗ್ರಹವಿರಲು ಈ ದೈತ್ಯರ ಪ್ರಯತ್ನಗಳೆಲ್ಲ ವ್ಯರ್ಥವಾದುದು ಅಚ್ಚರಿಯೇನಲ್ಲ.39

ತನ್ನ ಅಣತಿಯಂತೆ ದೈತ್ಯರು ಪ್ರಹ್ಲಾದನನ್ನು ಕೊಲ್ಲಲು ಮಾಡಿದ ಯತ್ನವು ವ್ಯರ್ಥವಾದುದನ್ನು ಕಂಡು ಹಿರಣ್ಯಕಶ್ಯಪನಿಗೆ ಮನಸ್ಸಿನಲ್ಲಿ ಭಯವುಂಟಾಯಿತು. ಇವನನ್ನು ಈಗಲೇ ಸಂಹರಿಸದಿದ್ದರೆ ಮುಂದೆ ಇವನಿಂದ ತನಗೆ ಅಪಾಯವಾಗಬಹುದೆಂದು ತರ್ಕಿಸಿ ಏನಕೇನ ಪ್ರಕಾರೇಣ ಪ್ರಹ್ಲಾದನನ್ನು ಸಂಹರಿಸಲು ಉದ್ಯುಕ್ತನಾದನು. ಸರಿ, ಪ್ರಾರಂಭವಾಯಿತು ಭಕ್ತಿ-ಕ್ರೌರ್ಯಗಳ ಸೆಣಸಾಟ!

ಹಿರಣ್ಯಕಶ್ಯಪನು ತನ್ನ ನಂಬಿಕೆಯ ಸೇವಕರಾದ ಕರಾಳ, ದುರ್ಮುಖ ಮುಂತಾದ ದೈತ್ಯರನ್ನು ಕರೆದು “ದೈತ್ಯವೀರರೇ ಈ ದುಷ್ಟ ಬಾಲಕನು ದೈತ್ಯವಂಶದ ಶತ್ರುವಾದ ಆ ಹರಿಯ ಭಜಕನಾಗಿದ್ದಾನೆ. ಇವನಿನ್ನು ಜೀವಿಸಬಾರದು ಇಕೋ ಈ ನಾಗಪಾಶದಿಂದ ಇವನನ್ನು ಬಿಗಿದು ಸಮುದ್ರದಲ್ಲಿ ಬಿಸುಟು ಬನ್ನಿರಿ” ಎಂದು ಆಜ್ಞಾಪಿಸಿದನು.

ಬಹು ಕ್ರೂರಿಯಾದ ಕರಾಳನು ನಾಗಪಾಶದಿಂದ ಪ್ರಹ್ಲಾದನನ್ನು ಬಂಧಿಸಿ ಹೊತ್ತುಕೊಂಡು ಸಮುದ್ರ ತೀರಕ್ಕೆ ಬಂದು ಪ್ರಹ್ಲಾದನನ್ನು ಎತ್ತಿ ಭೋರ್ಗರೆಯುತ್ತಿರುವ ಸಮುದ್ರ ಮಧ್ಯದಲ್ಲಿ ಎಸೆದು ರಾಜಧಾನಿಗೆ ಹಿಂದಿರುಗಿದನು.

ಆಗೊಂದು ಅದ್ಭುತ ವ್ಯಾಪಾರವೇ ನಡೆದುಹೋಯಿತು! ಪ್ರಹ್ಲಾದನು ಸಮುದ್ರಕ್ಕೆ ಬೀಳುತ್ತಿರುವಂತೆಯೇ ವರುಣದೇವನು ಮಿಂಚಿನ ವೇಗದಲ್ಲಿ ಸಮುದ್ರದಿಂದ ಮೇಲೆದ್ದು ಬಂದು ಬೀಳುತ್ತಿರುವ ಪ್ರಹ್ಲಾದನನ್ನು ತನ್ನೆರಡು ಕರಗಳಲ್ಲಿ ಹಿಡಿದು ಸಾಗರತೀರದ ಮರಳಿನ ಮೇಲೆ ಮಲಗಿಸಿ ಉಪಚರಿಸಿ ತೆರಳಿದನು! ಅದೇ ಸಮಯದಲ್ಲಿ ಗಗನ ಮಾರ್ಗದಲ್ಲಿ ಮೈದೋರಿದ ಗರುಡದೇವನು

ಪ್ರಹ್ಲಾದನಿಗೆ ಬಿಗಿದಿದ್ದ ನಾಗಪಾಶವನ್ನು ಕಿತ್ತೊಗೆದು ಭಕ್ತರಾಜ! ನನ್ನ ಪ್ರಭುವಿಗೆ ಪ್ರಿಯನಾದ ನಿನ್ನ ರಕ್ಷಣೆ ನನ್ನ ಕರ್ತವ್ಯವೆಂದು ಬಗೆದು ಈ ನಾಗಪಾಶದಿಂದ ನಿನ್ನನ್ನು ಬಿಡುಗಡೆ ಮಾಡಿದ್ದೇನೆ. ಬಾಲಕನಾದರೂ ನಿನ್ನ ಮನೋದಾರ್ಡ್ಯ, ಹರಿಭಕ್ತಿ ಶ್ಲಾಘನೀಯವಾದುದು! ಕುಮಾರ! ನಿನಗೆ ಮಂಗಳವಾಗಲಿ. ಜಯ ಶ್ರೀಹರಿ” ಎಂದು ಅದೃಶ್ಯನಾದನು. ಆಗ ಮತ್ತೆ ವರುಣದೇವನು ಅನರ್ಥ್ಯ ರತ್ನಗಳೊಡನೆ ಬಂದು ಪ್ರಹ್ಲಾದನನ್ನು ಎಚ್ಚರಗೊಳಿಸಿದನು. ಧ್ಯಾನದಿಂದ ಎಚ್ಚರಗೊಂಡ ಪ್ರಹ್ಲಾದನು “ಇದೇನು, ನಾನೆಲ್ಲಿರುವೆನು (ವರುಣನನ್ನು ನೋಡಿ) ಸ್ವಾಮಿ, ತಾವು ಯಾರು ?” ಎಂದು ಪ್ರಶ್ನಿಸಿದನು.

ವರುಣ : ಭಕ್ತಶಿಖಾಮಣಿ! ನಾನು ವರುಣದೇವನು. ನಿನ್ನ ತಂದೆಯ ಆಜ್ಞೆಯಂತೆ ಕರಾಳನೆಂಬ ದೈತ್ಯನು ನಾಗಪಾಶದಿಂದ ಬಂಧಿತನಾದ ನಿನ್ನನ್ನು ನನ್ನ ಮಡಿಲಿನಲ್ಲಿ ಹಾಕಿಹೋದನು. ಹರಿಭಕ್ತನಾದ ನಿನ್ನನ್ನು ನಾನೇ ಇಲ್ಲಿಗೆ ಕರೆತಂದನು. ಗರುಡದೇವನು ಬಂದು ನಾಗಪಾಶದಿಂದ ನಿನ್ನನ್ನು ವಿಮೋಚಿಸಿದನು. ವತ್ಸ, ಜಗತ್ವಾಮಿಯ ಪ್ರೇಮಪಾತ್ರನಾದ ನಿನ್ನನ್ನು ನಾಶಪಡಿಸಲು ಅದಾರು ಸಮರ್ಥರಾದಾರು ? ಇಕೋ, ಹರಿಭಕ್ತನಿಗೆ ನನ್ನ ಕಾಣಿಕೆ! (ಅನರ್ಥ್ಯರತ್ನ ವೈಡೂರ್ಯಾದಿಗಳನ್ನು ಸಮರ್ಪಿಸಿ) ಮಗು,

ಇವು ನಿನ್ನ ಜನಕನಿಗೂ ದುರ್ಲಭವಾದುದು. ಹರಿಭಕ್ತನಾದ ನಿನ್ನ ಸ್ಪರ್ಶದಿಂದ ನಾನು ಪುನೀತನಾದೆ.

ಪ್ರಹ್ಲಾದ : (ವಿಸ್ಮಯಾನಂದದಿಂದ) ಪೂಜ್ಯರೇ, ನಿಮ್ಮ ದರ್ಶನದಿಂದ ಧನ್ಯನಾದೆ! ಆಹಾ, ನನ್ನ ಸ್ವಾಮಿಯ ನಿಮ್ಮಲ್ಲಿಯಲ್ಲವೇ ವಿಶ್ರಮಿಸುವನು! ನೀವೆಂಥ ಸುಕೃತಶಾಲಿಗಳು ! ದೇವ, ಜಗತ್ತಿಗೆ ಆಶ್ರಯದಾತನಾದ ನನ್ನ ಪ್ರಭುವಿನ ಸತತ ಸಾನ್ನಿಧ್ಯದಿಂದ ಪವಿತ್ರರಾದ ನಿಮ್ಮನ್ನು ಕಂಡು ನನ್ನ ಜನ್ಮ ಸಾರ್ಥಕವಾಯಿತು. ಬಾಲಕನ ವಂದನೆಗಳನ್ನು ಸ್ವೀಕರಿಸಿ, ಆಶೀರ್ವದಿಸಿ (ನಮಸ್ಕರಿಸುವನು).

ವರುಣನು ಪ್ರಹ್ಲಾದನನ್ನು ಆಲಂಗಿಸಿ, “ಕುಮಾರ! ನಿನ್ನ ಹರಿಭಕ್ತಿಯು ಸ್ಥಿರವಾಗಿರಲಿ! ಪ್ರಹ್ಲಾದ, ನಿನಗೆ ಮಂಗಳವಾಗಲಿ” ಎಂದು ಹೇಳಿ ಅದೃಶ್ಯನಾದನು.

ಪ್ರಹ್ಲಾದರಾಜನು ಹರ್ಷಾತಿರೇಕದಿಂದ “ಭಗವನ್ ! ಪುರಾಣಪುರುಷೋತ್ತಮ! ಮೃತ್ಯುವಿನ ದವಡೆಯಿಂದ ಪಾರುಮಾಡಿದ ನಿನ್ನೀ ಕಾರುಣ್ಯಕ್ಕೆ ಎಣೆಯುಂಟೆ ?” ಎಂದು ಭಗವಂತನನ್ನು ಸ್ತುತಿಸಹತ್ತಿದನು -

ರಾಗ : ಹಿಂದೂಸ್ಥಾನಿ ಭೈರವಿ

ತಾಳ : ಆದಿ

ಗೋವರ್ಧನ ಗಿರಿಧಾರಿ ಮುರಾರಿ |

ಶಿವವಿರಿಂಚಿನುತ ಕೌಸ್ತುಭಧಾರಿ || ಪ ||

ಮಕರಕುಂಡಲಮಾಲಾ ಮುಕುಟವಿಹಾರಿ |

ಶಂಖ-ಚಕ್ರ ಪೀತಾಂಬರಧಾರಿ

ಗೋವರ್ಧನಗಿರಿಧಾರಿ ಮುರಾರಿ || || ಅ.ಪ. ||

ಸಮುದ್ರದಲ್ಲಿ ಬಿಸುಟರೂ, ನಾಗಪಾಶ - ಮೃತ್ಯುಬಂಧಗಳಿಂದ ತಪ್ಪಿಸಿಕೊಂಡು ಬದುಕಿ ಬಂದ ಪ್ರಹ್ಲಾದನನ್ನು ಕಂಡು ಆಶ್ಚರ್ಯ-ಕ್ರೋಧಮಗ್ನನಾದ ದೈತ್ಯರಾಜನು ಮತ್ತೆ ಕರಾಳ, ದುರ್ಮುಖರಿಗೆ ಸರ್ಪದಂಶನ ಮಾಡಿಸಿ ಪ್ರಹ್ಲಾದನನ್ನು ಸಂಹರಿಸುವಂತೆ ಆಜ್ಞಾಪಿಸಿದನು. ಪ್ರಹ್ಲಾದನನ್ನು ಎತ್ತಿಕೊಂಡು ಕರಾಳ-ದುರ್ಮುಖರು ಹಾವಾಡಿಗನೊಡನೆ ನಿರ್ಜನ ಪ್ರದೇಶಕ್ಕೆ ಬಂದು ಪ್ರಹ್ಲಾದನಿಗೆ ಸರ್ಪದಂಶನ ಮಾಡಿಸಲುದ್ಯುಕ್ತರಾದರು. ಆಗ ಎಲ್ಲಿಂದಲೋ ಒಂದು ಗರುಡಪಕ್ಷಿ ಒಂದು ಸರ್ಪವನ್ನು ಕಚ್ಚಿಕೊಂಡು ಹಾರಿಹೋಯಿತು! ಆಗ ದೈತ್ಯರು ಪ್ರಹ್ಲಾದನನ್ನು ಅರಮನೆಗೆ ಕರೆತಂದರು. ಪ್ರಹ್ಲಾದರಾಜ ಭಕ್ತಿಯಿಂದ ಭಗವಂತನನ್ನು ಸ್ತುತಿಸುತ್ತ ಅರಮನೆಗೆ ತೆರಳಿದನು.

ಗೋವರ್ಧನ ಗಿರಿಧಾರಿ ಮುರಾರಿ

ಶರಣಾಗತಜನ ಭಯಪರಿಹಾರಿ |

ಮುರುಳೀಮೋಹನ ಭಕ್ರೋದ್ದಾರಿ || 1 ||

ಕಯಾಧುರಾಣಿಯು ಅಂತಃಪುರದಲ್ಲಿ ಚಿಂತಾಕ್ರಾಂತಳಾಗಿರುವಾಗ ಹಿರಣ್ಯಕಶ್ಯಪನು ಬಂದು ಪ್ರಹ್ಲಾದನ ಅವಿಧೇಯತೆ, ತನ್ನ ಆಜ್ಞೆಯನ್ನು ಧಿಕ್ಕರಿಸಿ ಹರಿಸ್ತುತಿಯಲ್ಲಿ ಮಗ್ನನಾಗಿರುವುದು, ಕುಪಿತನಾದ ತಾನು ಅವನಿಗೆ ನೀಡಿದ ಶಿಕ್ಷೆಗಳು, ಅದೆಲ್ಲದರಿಂದಲೂ ಕುಮಾರನು ಅದು ಹೇಗೋ ಪಾರಾದುದು ಮುಂತಾದ ವಿಚಾರಗಳನ್ನೂ ಹೇಳಿದನು. ಕಯಾದುವು ತಂದೆ-ಮಕ್ಕಳ ಈ ಸೆಣಸಾಟದಿಂದ ಮುಂದೇನು ಅನರ್ಥವಾಗುವುದೋ ಎಂದು ಭಯಗೊಂಡು “ನಾಥ! ಪ್ರಹ್ಲಾದನಿನ್ನೂ ಬಾಲಕ. ಹುಡುಗರಿಗೆ ಈ ರೀತಿ ಹಠ ಸ್ವಾಭಾವಿಕ. ಅವನನ್ನು ನಾನು ಸರಿಪಡಿಸುವೆನು, ನೀವು ನಿಶ್ಚಿಂತೆಯಿಂದಿರಿ” ಎಂದಳು. ಹಿರಣ್ಯಕಶ್ಯಪನು “ರಾಣಿ, ಇನ್ನು ಚಿಂತೆಗೆ ಅವಕಾಶವಿಲ್ಲ. ಆ ಪಿತೃದ್ರೋಹಿಯನ್ನು ಸರಿಪಡಿಸುವ ಶ್ರಮವೂ ಇನ್ನು ನಿನಗಿಲ್ಲ” ಎಂದು ಗಹಗಹಿಸಿ ನಗಹತ್ತಿದನು.

ಪತಿಯ ಮಾತಿನ ಮರ್ಮವನ್ನರಿಯದೆ ಭಯದಿಂದ ಕಯಾದುವು “ಪ್ರಾಣವಲ್ಲಭ! ಹೀಗೇಕೆ ಹೇಳುವಿರಿ. ಪ್ರಹ್ಲಾದಕುಮಾರನೆಲ್ಲಿ? ಅವನನ್ನೇನು ಮಾಡಿದಿರಿ” ಎಂದಾಗ ಹಿರಣ್ಯಕಶ್ಯಪನು “ಇನ್ನೆಲ್ಲಿಯ ಪ್ರಹ್ಲಾದ! ಅವನನ್ನು ಬೆಟ್ಟದಿಂದ ತಳ್ಳಿ ಸಂಹರಿಸಲು ಅಷ್ಟಾವಕ್ರನೊಡನೆ ಕಳಿಸಿರುವೆನು. ಇಷ್ಟು ಹೊತ್ತಿಗೆ ಆ ದೈತ್ಯಕುಲಕುಠಾರನು ಮರಣ ಹೊಂದಿರಬಹುದು! ಆ ಸಂತೋಷದ ವಾರ್ತೆ ಕೇಳಲು ಕಾತುರನಾಗಿರುವೆನು” ಎಂದನು. ಪತಿಯ ಮಾತನ್ನು ಕೇಳಿದ ಕೂಡಲೇ ಕಯಾಧುವು ಭಯಾರ್ತಳಾಗಿ 'ಹಾ, ಕುಮಾರ' ಎಂದು ಮೂರ್ಛಿತಳಾದಳು. ದೈತ್ಯರಾಜನು ಅವಳನ್ನು ಎಚ್ಚರಗೊಳಿಸಿ “ರಾಣಿ! 'ಕುಲಸ್ವಾರ್ಥ ತ್ಯಜೇದೇಕು' ವಂಶದ ಹಿತದೃಷ್ಟಿಯಿಂದ ಕುಲಕುಠಾರನಾಗಬಹುದಾದ ಒಬ್ಬ ಮಗನನ್ನು ತ್ಯಜಿಸಬೇಕೆಂದು ಅಭಿಯುಕ್ತವಚನವಿದೆ. ನಮ್ಮ ದೈತ್ಯವಂಶದ ಹಿತಕ್ಕಾಗಿ ಪ್ರಹ್ಲಾದನನ್ನು ಬಲಿಕೊಡಬೇಕಾಯಿತು! ನನ್ನನ್ನು ಕ್ಷಮಿಸು ಕಯಾಧು” ಎಂದು ರಾಣಿಯನ್ನು ಸಮಾಧಾನಪಡಿಸಹತ್ತಿದನು.

ಎಚ್ಚರಗೊಂಡ ಕಯಾದುವು ಕಣ್ಣೀರು ಸುರಿಸುತ್ತಾ ಹಾ, ಕುಮಾರ, ಪ್ರಹ್ಲಾದ ನೀನಿಂತು ಅಪಮೃತ್ಯುಗೀಡಾಗಬೇಕೆಂದೇ ನಾನು ನಿನ್ನನ್ನು ಹಡೆದೆನೇ ? ಅಯ್ಯೋ, ಈ ದುಃಖವನ್ನು ನಾನೆಂತು ಸಹಿಸಲಿ” ಎಂದು ಗೋಳಿಡುತ್ತಿರಲು ದೈತ್ಯರಾಜನು “ಶಾಂತಳಾಗು ದೇವಿ, ಸಮಾಧಾನ ತಾಳು” ಎಂದು ಸಂತೈಸಿದನು.

ಕಯಾಧುವಿನ ಕಣ್ಣಿನಲ್ಲಿ ಧಾರಾಕಾರವಾಗಿ ನೀರು ಹರಿಯಹತ್ತಿತು. ದುಃಖಾರ್ತಳಾದ ಆ ತಾಯಿ ಹುಚ್ಚಳಂತೆ ಪುತ್ರವಿಯೋಗವನ್ನು ಸಹಿಸಲಾಗದೆ ಬಡಬಡಿಸಹತ್ತಿದಳು.

“ಕಂದ, ಪ್ರಹ್ಲಾದ! ನಿನ್ನೀ ತಾಯಿಯನ್ನು ತ್ಯಜಿಸಿ ಹೊರಟುಹೋದೆಯಾ, ಕುಮಾರ! ನೀನೆಲ್ಲಿರುವೆ ? ಹೂಂ, ಇನ್ನೆಲ್ಲಿಯ ಪ್ರಹ್ಲಾದ ನನ್ನ ಆ ಮುದ್ದು ಮಗನು ಪರ್ವತದ ಕೆಳಭಾಗದ ಅದಾವುದೋ ಅಂಧಕಾರಮಯ ಕರಾಳಗರ್ತದಲ್ಲಿ ಬಿದ್ದು ಅಸುವನ್ನು ನೀಗಿರುವನು. ಕಂದ, ನನ್ನ ಮಾತನ್ನಾಲಿಸಿದ್ದರೆ, ನಿನಗೀಗತಿ ಬರುತ್ತಿರಲಿಲ್ಲ. ಈಗ ನಾನು ನಿನ್ನನ್ನಗಲಿ ಹೇಗೆ ಜೀವಿಸಲಿ ? (ಭ್ರಮಿಷ್ಕಳಂತೆ) ಇಲ್ಲ, ನನ್ನ ಕಂದ ಮೃತನಾಗಿಲ್ಲ! ನನ್ನ ಹೃದಯದಲ್ಲಿ ಅದೇನೋ ಒಂದು ಆಶಾಕಿರಣ ಮೂಡುತ್ತಿದೆ. ತಾಯಿಯ ಮನದ ಅನಿಸಿಕೆ ಹುಸಿಯಾಗಲಾರದು. ಪರಮಾತ್ಮಾ, ನನ್ನ ಮುದ್ದು ಪ್ರಹ್ಲಾದನನ್ನು ನನಗೆ ಉಳಿಸಿಕೊಡು ತಂದೆ' ಎಂದು ಪ್ರಾರ್ಥಿಸುತ್ತಿರುವಂತೆಯೇ ಶ್ರೀಹರಿನಾಮ ಸಂಕೀರ್ತನ ಮಾಡುತ್ತಾ, ಅಷ್ಟಾವಕ್ರನೊಡನೆ ಪ್ರಹ್ಲಾದನು ಬಂದನು.

ಕಯಾದುವು ಕುಮಾರ ಪ್ರಹ್ಲಾದನನ್ನು ಕಂಡು ಆನಂದಾತಿರೇಕದಿಂದ ಓಡಿಬಂದು “ಮಗು, ಪ್ರಹ್ಲಾದ! ನೀನು ಸುಖವಾಗಿರುವೆಯಾ” ಎಂದು ತಬ್ಬಿ ಮೈಮರೆತಳು. ಪ್ರಹ್ಲಾದನೂ ತಾಯಿಯ ಕೊರಳನಪ್ಪಿ "ಅಮ್ಮಾ, ನಿನ್ನ ಆಶೀರ್ವಾದ, ಶ್ರೀಹರಿಯ ಕೃಪೆಯಿಂದ ಸುಖವಾಗಿರುವೆನಮ್ಮ” ಎಂದು ಹೇಳುತ್ತಿರಲು ಹಿರಣ್ಯಕಶ್ಯಪನು ಪ್ರಹ್ಲಾದನು ಬದುಕಿ ಬಂದಿರುವುದನ್ನು

ಕಂಡು ದಿಗ್ಧಾಂತನಾಗಿ ಇದೇನಚ್ಚರಿ, ಇವನು ಮತ್ತೆ ಬದುಕಿ ಬಂದಿರುವನಲ್ಲಾ! ತ್ರಿಲೋಕವನ್ನೇ ಜಯಿಸಿದ ನನಗೆ ಆ ಸ ಬಾಲಕನನ್ನು ಗೆಲ್ಲಲಾಗಲಿಲ್ಲವಲ್ಲ! (ಸಿಟ್ಟಿನಿಂದ) ಎಲವೋ ಪಿತೃದ್ರೋಹಿ! ನೀನಿನ್ನೂ ಜೀವಿಸಿರುವೆಯಾ?” (ಅಷ್ಟಾವಕ್ರನನ್ನು ಕೆಂಗಣ್ಣಿನಿಂದ ನೋಡಿ) “ಸ್ವಾಮಿದ್ರೋಹಿ! ಪ್ರಹ್ಲಾದ ಹೇಗೆ ಬದುಕಿದನು ? ನನ್ನ ಆಜ್ಞೆಯನ್ನು ಪಾಲಿಸಲಿಲ್ಲವೇ?” ಅಬ್ಬರಿಸಿದನು.

ಅಷ್ಟಾವಕ್ರನು ಭಯದಿಂದ ಕಂಪಿಸುತ್ತಾ “ಮಹಾಪ್ರಭು, ಈ ಸೇವಕನನ್ನು ಕ್ಷಮಿಸಿರಿ. ಅನ್ನದಾತಾ! ನಿಮ್ಮ ಅಪ್ಪಣೆಯಂತೆ ರಾಜಕುಮಾರನನ್ನು ಉನ್ನತವಾದ ಬೆಟ್ಟದ ತುದಿಯಿಂದ ಕೆಳಕ್ಕೆ ನೂಕಿದೆನು. ಆ ಹರಿಯನ್ನು ಸ್ಮರಿಸುತ್ತಾ ಕುಮಾರ ಕೇ ಬಿದ್ದನು! ಏನಾಯಿತೆಂದು ನೋಡಲು ಗಿರಿಯ ತಳಭಾಗಕ್ಕೆ ಹೋದೆನು. ಏನು ಹೇಳಲಿ ಪ್ರಭು! ಪ್ರಹ್ಲಾದಕುಮಾರನು ಆನಂದದಿಂದ ನಲಿಯುತ್ತಾ ಗಾನಮಾಡುತ್ತಾ ನರ್ತಿಸುತ್ತಿದ್ದನು! ಆ ಅಚ್ಚರಿಯನ್ನು ಕಂಡು ನನ್ನ ಕಣ್ಣುಗಳನ್ನು ನಾನೇ ನಂಬದಾದೆ!! ಮುಂದೇನೂ ಮಾಡಲು ತೋರದೆ ವಿಷಯವನ್ನು ಅರಿಕೆ ಮಾಡಲು ಕುಮಾರನೊಡನೆ ಬಂದಿದ್ದೇನೆ” ಎಂದು ವಿಜ್ಞಾಪಿಸಿದನು. ಹಿರಣ್ಯಕಶ್ಯಪನು ಕಿಂಕರ್ತವ್ಯಮೂಢನಾಗಿ, ಮಾತಾಪುತ್ರರು ಪರಸ್ಪರ ಪ್ರೇಮದಿಂದ ತಬ್ಬಿಕೊಂಡು ನಲಿಯುತ್ತಿರುವುದನ್ನು ನೋಡುತ್ತಾ ವಿಸ್ಟಾರಿತನೇತ್ರನಾಗಿ ನಿಂತನು.

ಕಯಾಧುವು ಪುತ್ರನ ಅಂಗಾಗಗಳನ್ನು ಮಮತೆಯಿಂದ ಸ್ಪರ್ಶಿಸುತ್ತಾ “ಅಹಹ! ನನ್ನ ಪುತ್ರನು ಜೀವಿಸಿರುವನು! ಮಗು, ಪ್ರಹ್ಲಾದಾ, ಆ ಮಹಾಶೃಂಗಾಗ್ರದಿಂದ ಕೆಳಗೆ ಬಿದ್ದ ನಿನಗೆ ಏನೂ ಘಾಸಿಯಾಗಲಿಲ್ಲವೇ ?” ಎಂದೆನಲು, ಪ್ರಹ್ಲಾದನು “ತಾಯಿ, ಆ ಜಗದೀಶನೇ ಪೊರೆಯುತ್ತಿರಲು ನನಗೇನಾಗುವುದಮ್ಮಾ?” ಎಂದನು.

ಕಯಾಧು : (ಆನಂದದಿಂದ) ಅಹುದು ಕಂದ! ಆ ಸ್ವಾಮಿಯು ಸರ್ವದಾ ನಿನ್ನನ್ನು ರಕ್ಷಿಸುತ್ತಿರುವನು. ಅಂದು ನಾರದ ಮಹರ್ಷಿಗಳ ಆಶ್ರಮದಲ್ಲಿ ಆ ಭಕ್ತಬಂಧುವು ನಿನಗೆ ವರದಾನ ಮಾಡಿದ್ದು ಈಗ ನೆನಪಿಗೆ ಬಂದಿತು. ಕುಮಾರ! ನೀನು ಭಾಗ್ಯಶಾಲಿ, ನೀನೆಂತು ಜೀವಿಸಿದೆ ಹೇಳಪ್ಪ?

ಪ್ರಹ್ಲಾದ : ಮಾತಾ! ನಾನು ಶ್ರೀಹರಿಯನ್ನು ಧ್ಯಾನಿಸುತ್ತಿರುವಾಗ ಅಷ್ಟಾವಕ್ರನು ನನ್ನನ್ನು ಕೆಳಕ್ಕೆ ನೂಕಿದನು. ಪರ್ವತಾಗ್ರದಿಂದ ನಾನು ಕೆಳಕ್ಕೆ ಬೀಳುತ್ತಿರುವಂತೆಯೇ ಸರ್ವಾಭರಣಭೂಷಿತಳೂ ಅತ್ಯಂತ ತೇಜಸ್ವಿನಿಯೂ ಆದ ದೇವಿಯೋರ್ವಳು ನನ್ನನ್ನು ತನ್ನ ಮಡಿಲಲ್ಲಿ ಹಿಡಿದು ಹೂವಿನಂತೆ ಮೆಲ್ಲಗೆ ಧರೆಗಿಳಿಸಿ ತಲೆಯ ಮೇಲೆ ಕರವಿರಿಸಿ “ವತ್ಸ, ಪ್ರಹ್ಲಾದಾ, ನಾನೇ ಭೂದೇವಿಯು! ನನ್ನ ಪತಿಗೆ ಪ್ರೀತ್ಯಾಸ್ಪದವಾದ ನಿನ್ನನ್ನು ಸರ್ವದಾ ಕಾಪಾಡುವೆನು. ನಿನಗೆ ಮಂಗಳವಾಗಲಿ” ಎಂದು ಹೇಳಿ ಅದೃಶ್ಯಳಾದಳು! ಆಹಾ, ಆ ತಾಯಿಯನ್ನು ನೋಡುತ್ತಿರುವಾಗ ನಿನ್ನ ನೆನಪಾಯಿತಮ್ಮಾ! ಅಂತೆಯೇ ನಿನ್ನನ್ನು ಕಾಣಲು ಆತುರದಿಂದ ಓಡೋಡಿ ಬಂದೆನಮ್ಮ.

ಕಯಾಧುವಿನ ಕಣ್ಣಿನಲ್ಲಿ ಆನಂದಾಶ್ರು ಮಿಡಿಯಿತು. ಮಮತೆಯಿಂದ ಮಗನನ್ನು ಬಿಗಿದಪ್ಪಿ ಮುದ್ದಿಸುತ್ತಾ ಮೈಮರೆತಳು. ಹಿರಣ್ಯಕಶ್ಯಪನು 'ಭೂದೇವಿ' ಎಂದು ಮಗನು ಹೇಳಿದ್ದನ್ನು ಕೇಳಿ ಕಟಕಟನೆ ಹಲ್ಲು ಕಡಿದನು, ತನ್ನ ಸಹೋದರನ ಮೃತ್ಯುವಿಗೆ ಕಾರಣಳಾದವಳೇ ತನ್ನ ಮಗನನ್ನು ರಕ್ಷಿಸಿದಳೆಂದು ತಿಳಿದ ಮೇಲಂತೂ ಅವನ ಹೃದಯದಲ್ಲಿ ದ್ವೇಷ-ಕೋಪಜ್ವಾಲೆಯು ಭುಗಿಲೆಂದು ಉರಿಯಹತ್ತಿತು, ಅತಿಕೋಪದಿಂದ ಪ್ರಶ್ನಿಸಿದ “ಪ್ರಹ್ಲಾದ, ಏನಂದೆ? ಭೂದೇವಿ! ಭೂದೇವಿ!! ಆ ಪಾತಕಿಯೇ ನಿನ್ನನ್ನು ರಕ್ಷಿಸಿದಳೇ?”

ಪ್ರಹ್ಲಾದ : ಅಹುದು ತಂದೆಯೇ, ಆ ದಯಾಮಯಳೇ ನನ್ನ ರಕ್ಷಕಳು. ಮಾತೆಗಿಂತ ಅತಿಶಯ ಮಮತೆ ತೋರಿದ ಆ ಮಹಾನುಭಾವಳನ್ನು ಪಾತಕಿಯೆನ್ನದಿರಪ್ಪಾ.

ಹಿರಣ್ಯಕಶ್ಯಪು : (ಕೌತುಕ-ದುಃಖದಿಂದ) ಆಶ್ಚರ್ಯ! ಪ್ರಹ್ಲಾದ, ನಿನ್ನ ಚಿಕ್ಕಪ್ಪನ ಮರಣಕ್ಕೆ ಕಾರಣಳಾದ ಆ ಮಾಯಾಂಗನೆಯು ನಿನ್ನನ್ನು ಬದುಕಿಸಿ, ನನ್ನನ್ನು ಕೊಂದಳು! ಹಾಯ್, ಹಾಯ್, ಎಲ್ಲವೂ ವಿಪರೀತವಾಗಿ ಪರಿಣಮಿಸುತ್ತಿದೆಯಲ್ಲ!

ಕಯಾಧು : (ಕರಮುಗಿದು) ಆಹಾ, ಭೂದೇವಿ! “ಕ್ಷಮೆ” ಎಂಬ ನಿನ್ನ ಹೆಸರು ಇದೀಗ ಸಾರ್ಥಕವಾಯಿತು. ತಾಯಿಯ ಮನದಳಲನ್ನು ತಾಯಿಯಲ್ಲವೇ ಅರಿಯಬಲ್ಲಳು! ದೇವಿ! ಭೂಮಾತೆ, ನನ್ನ ಕುಮಾರನನ್ನು ಸಂರಕ್ಷಿಸಿದ ನಿನಗೆ ಅನಂತ ವಂದನೆಗಳು.

ಪ್ರಹ್ಲಾದ : ತಂದೆಯೇ! ತಾಯಿಯು ಹೇಳಿದಂತೆ ಕ್ಷಮಾಗುಣದಿಂದ 'ಕ್ಷಮೆ'ಯೆಂದೇ ಖ್ಯಾತಳಾದ ಭೂಮಾತೆಯು ಯಾರನ್ನೂ ದ್ವೇಷಿಸುವುದಿಲ್ಲ. ಜಗತ್ತಿನ ಜನರು ಮಾಡುವ, ಮಾಡುತ್ತಿರುವ ಎಲ್ಲಾ ಅನ್ಯಾಯ, ಅಧರ್ಮ, ಅತ್ಯಾಚಾರಗಳನ್ನೂ ಸಹಿಸಿ ಕಾಪಾಡುವ ಆ ತಾಯಿಯು ಯಾರಿಗೂ ಅಪಕಾರ ಮಾಡುವವಳಲ್ಲ, ಆದರೆ ಅಶಾಶ್ವತವಾದ ದೇಹವನ್ನು, ಪೌರುಷ - ಬಾಹುಬಲಗಳನ್ನು ನಂಬಿ ದರ್ಪದಿಂದ ಮೇರೆ ಮೀರಿ ವರ್ತಿಸಿ ಜನರು ಅಧರ್ಮ-ಅತ್ಯಾಚಾರಗಳನ್ನಾಚರಿಸಿ ಕುಕರ್ಮದ ಫಲವನ್ನು ಅನುಭವಿಸುವರು 'ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಮ್' ಅಷ್ಟೇ! ಜನಕ! ಈಗಲಾದರೂ ಶ್ರೀಹರಿಯ ಮಹಿಮೆಯನ್ನರಿತು ಆ ಸ್ವಾಮಿಯ ಮೇಲಿನ ದ್ವೇಷವನ್ನು ಬಿಡಲಾರೆಯಾ ?

ಹಿರಣ್ಯಕಶ್ಯಪು : “ಛೀ ಮೂರ್ಖ ! ನನಗೇ ಉಪದೇಶಿಸುವೆಯಾ?” (ಸ್ವಗತ) ಹಾಯ್, ದುರ್ವಿಧಿಯೇ ನನಗೆಂತಹ ಸಂಕಟವನ್ನು ತಂದೊಡ್ಡಿರುವೆ, ಈ ಮುದ್ದು ಬಾಲಕನ ನಿರ್ಮಲ ಮೃದುತಮ ಹೃದಯದಲ್ಲಿ ಹರಿಭಕ್ತಿಯ ವಿಷಬೀಜವನ್ನು ಬಿತ್ತಿ, ಇವನಿಗೆ ಭಕ್ತಿಯ ಹುಚ್ಚು ಹಿಡಿಸಿ, ಮಧುರಮಯವಾಗಿದ್ದ ನಮ್ಮ ಸಂಸಾರವೆಂಬ ನಂದನವನದಲ್ಲಿ ದಾವಾನಲವನ್ನೇಕೆ ಹಬ್ಬಿಸಿರುವೆ ? ಈ ದಳ್ಳುರಿಯನ್ನು ನಾನೆಂತು ಸಹಿಸಲಿ ? ದೈತ್ಯವಂಶದ ಹಿತವನ್ನು ಬಿಟ್ಟು ಈ ಕರುಳಿನ ಕಂದಮ್ಮನನ್ನು ಪ್ರೀತಿಸಲೇ ಅಥವಾ ಕುಲವೈರಿಯ ಸ್ತುತಿಪಾಠಕನಾಗಿರುವ ಈ ದುಷ್ಟ ಬಾಲಕನನ್ನು ತ್ಯಜಿಸಿ ದೈತ್ಯವಂಶದ ಹಿತ ಸಾಧಿಸಲೇ? ಈಗ ನನ್ನ ಕರ್ತವ್ಯವೇನು ? ನಾನೇನು ಮಾಡಲಿ ? ಎಂದು ಚಿಂತಿಸುತ್ತಾರಾಜಸಭೆಗೆ ತೆರಳಿದನು.

ದಿನೇ ದಿನೇ ಪ್ರಹ್ಲಾದನಲ್ಲಿ ಪರಮಾತ್ಮನ ಭಕ್ತಿಯು ಅಭಿವೃದ್ಧಿಸಹತ್ತಿತು. ಇದರಿಂದ ಹಿರಣ್ಯಕಶ್ಯಪನ ಚಿಂತೆಯೂ ಅಧಿಕವಾಯಿತು. ಸಾಮ-ದಾನ-ಭೇದ ಮತ್ತು ದಂಡ ಎಂಬ ನಾಲ್ಕು ವಿಧ ಉಪಾಯಗಳಿಂದಲೂ ಪ್ರಹ್ಲಾದನನ್ನು ದಾರಿಗೆ ತರಲು ದೈತ್ಯರಾಜನು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಹರಿಭಕ್ತನೆಂದು ಅವನು ಪುತ್ರನನ್ನು ಹೆಚ್ಚಾಗಿ ದ್ವೇಷಿಸಹತ್ತಿದನು. ಮತ್ತೆ ಮತ್ತೆ ದಂಡೋಪಾಯಗಳಿಂದ ದೈತ್ಯವಂಶದ ನಡೆ-ನುಡಿಗಳನ್ನನುಸರಿಸುವಂತೆ ಮಾಡಲು ಹಿರಣ್ಯಕಶ್ಯಪನು ಹೆಣಗಾಡಿದನು. ಸತ್ಯನಾಮಕನಾದ ಪರಮಾತ್ಮನ ಮಹತ್ವವನ್ನು ತಂದೆಗೆ ತಿಳಿಸಿಕೊಟ್ಟು; ಅವನು ಉದ್ಘತನಾಗುವಂತೆ ಮಾಡಲು ಪ್ರಹ್ಲಾದನು ಸತ್ಯಾಗ್ರಹವನ್ನೇ ಹೂಡಿದನು.

ದೈತ್ಯಚಕ್ರವರ್ತಿಯು ಕ್ರೋಧದಿಂದ ಉನ್ಮತ್ತನಾಗಿ ಮಗನಿಗೆ ವಿವಿಧ ಹಿಂಸೆಗಳನ್ನು ಕೊಡಲಾರಂಭಿಸಿದನು. ಮದಗಜಗಳಿಂದ ಮಗನನ್ನು ತುಳಿಸಲು ಆನೆಗಳನ್ನು ಬಿಟ್ಟಾಗ ಅವು ಸೊಂಡಿಲುಗಳನ್ನು ಮೇಲೆತ್ತಿ ಭಕ್ತರಾಜರಿಗೆ ನಮಸ್ಕರಿಸಿ ಓಡಿಹೋದವು! ಇನ್ನೂ ಕೆಲ ಮತ್ತೇರಿದ ಆನೆಗಳ ಚೂಪಾದ ದಂತಗಳಿಂದ ಪುತ್ರನನ್ನು ತಿವಿಸಿದಾಗ ಆನೆಗಳ ದಂತಗಳೇ ಮುರಿದು ಅವು ಭಯಂಕರ ಶಬ್ದ ಮಾಡುತ್ತಾ ಓಡಿದವು!! ಅನಂತರ ದೈತ್ಯರಾಜನ ಅಪ್ಪಣೆಯಂತೆ ಅಸುರರು ಪ್ರಹ್ಲಾದನನ್ನು ಉರಿಯುವ ಬೆಂಕಿಯಲ್ಲಿ ನೂಕಿದರು, ಅಗ್ನಿದೇವನ ಆ ಭಯಂಕರ ಕಾವು ಪ್ರಹ್ಲಾದನಿಗೆ ಶ್ರೀಗಂಧಾಭಿಷೇಕ ಮಾಡಿದಂತೆ ತಂಪಾಯಿತು! ಶಸ್ತ್ರಾಸ್ತ್ರಗಳಿಂದ ಹಿಂಸಿಸಿದಾಗ ಅವುಗಳೇ ಭಗ್ನವಾದವು! ದೈತ್ಯವೀರರು ದೊಡ್ಡ ದೊಡ್ಡ ಬೆಟ್ಟಗಳು, ಬಂಡೆಗಲ್ಲುಗಳನ್ನು ಕುಮಾರನ ಮೇಲೆ ಎತ್ತಿಹಾಕಿದರು. ಅವು ಪ್ರಹ್ಲಾದನಿಗೆ ಪುಷ್ಪವೃಷ್ಟಿಯಾಗಿ ಪರಿಣಮಿಸಿದವು! ಮಗನನ್ನು ಹಿರಣ್ಯಕಶ್ಯಪನು ಕೈಕಾಲು ಹೆಡಮುರಿಗೆ ಕಟ್ಟಿಸಿ ಅಂಧಕೂಪದಲ್ಲಿ ಅನ್ನಾಹಾರಗಳಿಲ್ಲದೆ ನಿರ್ಬಂಧನದಲ್ಲಿಡಿಸಿದನು. ಸಮಸ್ತ ಚೇತನಪ್ರಪಂಚಕ್ಕೆ ಆಯಾ ಕಾಲದಲ್ಲಿ ಇದ್ದಲ್ಲಿಯೇ ಆಹಾರವನ್ನೊದಗಿಸಿ ಕಾಪಾಡುವ ಪ್ರಭುವು ತನ್ನ ಪರಮಭಕ್ತನ ಯೋಗಕ್ಷೇಮವನ್ನು ನೋಡದಿರುವನೆ ? ಪ್ರಹ್ಲಾದನಿಗೆ ಹಸಿವು,

ನೀರಡಿಕೆಗಳೇ ಆಗದಂತೆ, ಮೃಷ್ಟಾನ್ನ ಭೋಜನ ಮಾಡಿದಂತೆ ತೃಪ್ತಿಯನ್ನೇ ಕರುಣಿಸಿದನು!

ಹೀಗೆ ದೈತ್ಯರಾಜನು ಪತ್ರನನ್ನು ಸಂಹರಿಸಲು ಮಾಡಿದ ಎಲ್ಲಾ ಪ್ರಯತ್ನಗಳೂ, ವ್ಯರ್ಥವಾಗಿ ಪ್ರಹ್ಲಾದರಾಜನು ಎಂದಿನಂತೆ ನಗುತ್ತಲೇ ಸಂತೋಷದಿಂದ ಕಂಗೊಳಿಸುತ್ತಿದ್ದನು.

ತ್ರಿಲೋಕಗಳನ್ನೂ ಭೂವಿಭ್ರಮ ಮಾತ್ರದಿಂದಲೇ ಜಯಿಸಿದ ಪರಾಕ್ರಮಿಯಾದ ನಿನಗೇನು ಚಿಂತೆ ? ಹುಡುಗರ ಬುದ್ಧಿ ಒಮ್ಮೆ ಆಗ ಶಂಡಾಮರ್ಕರು ಬಂದು ದೈತ್ಯರಾಜನಿಗೆ ಏಕಾಂತದಲ್ಲಿ ಧೈರ್ಯ ಹೇಳಿ ವಿಜ್ಞಾಪಿಸಿದರು - “ದೈತ್ಯೇಂದ್ರ

ಒಳಿತು, ಒಮ್ಮೆ ಕೆಡಕಾಗುವುದು, ಮಕ್ಕಳಿಗೆ ವಿವೇಕವಿನ್ನೂ ಬಂದಿರುವುದಿಲ್ಲ. ಮುಂದೆ ಕಾಲಾಂತರದಲ್ಲಿ ಉಪಾಯ ಯೋಜನೆಗಳಿಂದ ಅವನ ಬುದ್ಧಿ ಸರಿಹೋಗಬಹುದು. ರಾಜನ್, ಹಿಂಸೆಯು ಹೆಚ್ಚಾದಂತೆ ಮಕ್ಕಳ ಹಟವೂ ಹೆಚ್ಚುವದು. ಆದ್ದರಿಂದ ಅವನನ್ನು ಪೂಜ್ಯ ಶುಕ್ರಾಚಾರ್ಯರು ಬರುವವರೆಗೆ ನಿರ್ಬಂಧನದಲ್ಲಿಟ್ಟು ಅವರಿಂದ ಉಪದೇಶ ಮಾಡಿಸು, ಆ ಅವನು ನಮ್ಮ ಮಾರ್ಗಕ್ಕೆ ಬರುವನು” ಎಂದು ಸಲಹೆ ನೀಡಿದರು.

ಗುರುಪುತ್ರರಾದ ಶಡಾಮರ್ಕರ ಸಲಹೆಗೆ ಸಮ್ಮತಿಸಿ ಹಿರಣ್ಯಕಶ್ಯಪನು “ಪೂಜ್ಯರೇ, ಹಾಗೆಯೇ ಆಗಲಿ, ನೀವು ಪ್ರಹ್ಲಾದನನ್ನು ನಿರ್ಬಂಧನದಲ್ಲಿಟ್ಟು ಅವನಿಗೆ ರಾಜಧರ್ಮ, ಗೃಹಸ್ಥಧರ್ಮ ಮತ್ತು ನಮ್ಮ ವಂಶದ ಸಂಪ್ರದಾಯಗಳನ್ನು ಬೋಧಿಸಿರಿ” ಎಂದನು. ಅದರಂತೆ ಅವರು ಪ್ರಹ್ಲಾದನಿಗೆ ಮೋಕ್ಷಮಾರ್ಗವನ್ನು ಬಿಟ್ಟು ಕೇವಲ ಪ್ರವೃತ್ತಿಮಾರ್ಗಕ್ಕೆ ಸಹಾಯಕವಾದ ಧರ್ಮ, ಅರ್ಥ, ಕಾಮ ವಿಚಾರಗಳನ್ನು ಉಪದೇಶಿಸಿದರು. ಅವು ರಾಗದ್ವೇಷಗಳನ್ನು ಹೆಚ್ಚಿಸುವುದೆಂದು ತಿಳಿದ ಪ್ರಹ್ಲಾದನು ಅದನ್ನು ಕಡೆಗಣಿಸಿದನು.