
ಕಲಿಯುಗ - ಕಲ್ಪತರು
ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು
ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು
೨೫. ಉಪಸಂಹಾರ
ಶ್ರೀಪ್ರಹ್ಲಾದರಾಜರ ಚರಿತ್ರೆಯು ಅತ್ಯಂತ ಮಂಗಳಕರವಾದುದು. ಪ್ರಹ್ಲಾದರ ಚರಿತ್ರೆಯು ಭಾಗವತ, ನೃಸಿಂಹಪುರಾಣ, ವಾಯುಪುರಾಣ, ವಿಷ್ಣುಪುರಾಣ, ಮತ್ತ್ವ ಪುರಾಣ, ಹರಿವಂಶ, ಗರುಡಪುರಾಣ-ಬ್ರಹ್ಮಕಾಂಡ, ಬ್ರಹ್ಮಾಂಡಪುರಾಣ ಮಹಾಭಾರತಾದಿಗಳಲ್ಲಿ ಸ್ಕೂಲವಾಗಿ, ವಿಸ್ತಾರವಾಗಿ ನಿರೂಪಿತವಾಗಿದೆ. ವೇದಗಳಲ್ಲಿಯೂ ಪ್ರಹ್ಲಾದರ ಹೆಸರು ಉಲ್ಲೇಖಿಸಲ್ಪಟ್ಟಿದೆ. ಈ ಎಲ್ಲ ಪ್ರಮಾಣಗ್ರಂಥಗಳಿಂದಲೂ ಶ್ರೀಪ್ರಹ್ಲಾದರಾಜರು ಶ್ರೀಹರಿಯ ಏಕಾಂತ ಭಕ್ತರು, ಆಜನ್ಮ ವೈಷ್ಣವರು, ದೇವಸ್ವಭಾವರು ಕೃಷ್ಣಗ್ರಹಗೃಹೀತಾತ್ಮರು, ನಿರ್ವೈರರು, ಪ್ರಶಾಂತರು, ಜಿತೇಂದ್ರಿಯರು, ಭಾಗವತಧರ್ಮ- ಪ್ರಸಾರಕರು, ವೇದಪ್ರತಿಪಾದ್ಯಮಹಿಮರು ಎಂಬ ವಿಚಾರವು ಸ್ಪಷ್ಟವಾಗುವುದು.
ಶ್ರೀಹರಿಯ ಏಕಾಂತಭಕ್ತರೂ, ಪರಮಾನುಗ್ರಹಪಾತ್ರರೂ ಆದ ಶ್ರೀರಮಾ-ಬ್ರಹ್ಮ -ವಾಯುದೇವರು ಅವರುಗಳ ವಿಶೇಷ ಸನ್ನಿಧಾನ ಪಾತ್ರರಾದವರೇ ಶ್ರೀಹರಿಯಿಂದ ಸಾಕ್ಷಾತ್ತಾಗಿ ಉಪದೇಶ ಪಡೆಯಲು ಅರ್ಹರೆಂದು ಶಾಸ್ತ್ರಾಧಾರಗಳಿಂದ ತಿಳಿದುಬರುತ್ತದೆ. ಆದರೆ ಶ್ರೀನೃಸಿಂಹರೂಪೀ ಶ್ರೀಹರಿಯು ಪ್ರಹ್ಲಾದರಿಗೆ ತತ್ರೋಪದೇಶ ಮಾಡಿರುವುದನ್ನು ವಿಚಾರ ಮಾಡಿದಾಗ ಪ್ರಹ್ಲಾದರಾಜರು ತಮ್ಮ ಸರ್ವಸ್ವವನ್ನು ಶ್ರೀಹರಿ ಚರಣಗಳಿಗೆ ಸಮರ್ಪಿಸಿದ್ದರಿಂದಲೂ, “ವಾಯುನಾ ಚ ಸಮಾವಿಷ್ಟಃ ಮಹಾಬಲಸಮನ್ವಿತಃ” ಎಂಬ ಪ್ರಮಾಣದಂತೆ ಶ್ರೀಭಾರತೀರಮಣಮುಖ್ಯಪ್ರಾಣದೇವರ ಸಂತತ ಸನ್ನಿಧಾನಯುಕ್ತರಾದ್ದರಿಂದಲೇ ಶ್ರೀನರಹರಿಯು ಹೀಗೆ ಅವರಿಗೆ ತತ್ರೋಪದೇಶ ಮಾಡಿ ಅನುಗ್ರಹಿಸಿದನೆಂಬುದು ವ್ಯಕ್ತವಾಗುತ್ತದೆ.
ಶ್ರೀಪ್ರಹ್ಲಾದರಾಜರ ಚರಿತ್ರೆಯು ಸಕಲಶಾಸ್ತ್ರ ಪ್ರಮೇಯಗಳ ಕೈಗನ್ನಡಿಯಂತಿದೆಯೆಂದು ಧೈರ್ಯವಾಗಿ ಹೇಳಬಹುದು. ಇಲ್ಲಿ ಸಕಲಶಾಸ್ತ್ರಾರ್ಥಸಾರವಾ ಅಡಗಿದೆ. ಹರಿಯ ಅವತಾರ ಕಥೆಗಳು, ಆದಿದೈತ್ಯರಾದ ಹಿರಣ್ಯಕಶ್ಯಪು-ಹಿರಣ್ಯಾಕ್ಷರ ವಧದ್ವಾರಾ ಶ್ರೀಹರಿಯ ದುಷ್ಟಶಿಕ್ಷಣ-ಶಿಷ್ಟರಕ್ಷಣೆ ವಿಚಾರ ಭಗವತ್ನಿಯರಾದ ಪ್ರಹ್ಲಾದರಾಜರ ಮಂಗಳಕರ ಚರಿತ್ರೆ - ಅವರ ಭಕ್ತಿ, ಜ್ಞಾನ, ವೈರಾಗ್ಯ, ಪರಮಾತ್ಮನ ಯಥಾರ್ಥ ತತ್ವಜ್ಞಾನ, ಶ್ರೀಹರಿಯು ನೆರವೇರಿಸುವ ಸೃಷ್ಟಿ-ಸ್ಥಿತಿ-ಸಂಹಾರಾದಿ ಲೀಲಾವಿಲಾಸಗಳ ಕಥನ, ಬ್ರಹ್ಮದೇವರಿಂದಾರಂಭಿಸಿ ತೃಣಾಂತವಾಗಿ ಸಮಸ್ತ ಜೀವರೂ ಸತ್ಯಲೋಕಾದಿಗಳೂ ಪ್ರಳಯಕಾಲದಲ್ಲಿ ನಾಶಹೊಂದಿ ಶ್ರೀಹರಿಯ ಉದರದಲ್ಲಿ ಇರುವುದೆಂಬ ಜ್ಞಾನ, ದೇಶತಃ, ಕಾಲತಃ, ಗುಣತಃ ಶ್ರೀಹರಿಯು ದೊಡ್ಡವನೆಂಬ ಜ್ಞಾನ, ಭಾಗವತಧರ್ಮಾಚರಣೆಯಿಂದಲೇ ಪರಮಾತ್ಮ ಪ್ರಾಪ್ತಿ, ಅದು ದ್ವೇಷದಿಂದ ಖಂಡಿತ ಲಭಿಸುವುದಿಲ್ಲವೆಂಬ ಜ್ಞಾನ, ಆಧ್ಯಾತ್ಮಿಕಜ್ಞಾನ ವಿಚಾರ - ಇವೆಲ್ಲವೂ ಶ್ರೀಪ್ರಹ್ಲಾದರಾಜರ ಚರಿತ್ರೆಯಲ್ಲಿ ಹಾಸುಹೊಕ್ಕಾಗಿ ಹರಿದುಬಂದಿರುವುದರಿಂದ ಅಧಿಕಾರಿ ಜೀವರಿಗೆ, ಭಗವದಪರೋಕ್ಷವನ್ನು ಬಯಸುವ, ಆತ್ರೋದ್ಧಾರವನ್ನು ಇಚ್ಛಿಸುವವರಿಗೆ ಮತ್ತು ಸರ್ವಜೀವರ ಮುಖ್ಯಗುರಿಯಾದ ಆತ್ಯಂತಿಕ ದುಃಖ ನಿವೃತ್ತಿಪೂರ್ವಕವಾದ ಸ್ವಸ್ವರೂಪಾನಂದವಿರ್ಭಾವ ರೂಪ ಶಾಶ್ವತ ಸುಖಾಪೇಕ್ಷಿಗಳಿಗೆ ಈ ಚರಿತ್ರೆಯು ದಾರಿದೀಪವಾಗಿರುವುದೆಂದು ಘೋಷಿಸಬಹುದು. ಅಂತೆಯೇ ಶ್ರೀಪ್ರಹ್ಲಾದರಾಜರ ಈ ಚರಿತ್ರೆಯ ಪರಮಮಂಗಳಪ್ರದವಾಗಿದೆ.
ಪರಮಪುಣ್ಯಪ್ರದವಾದ ಈ ಮಹಾಭಾಗವತೋತ್ತಮರ ಚರಿತ್ರೆಯನ್ನು ಶ್ರದ್ಧಾಭಕ್ತಿಗಳಿಂದ ಶ್ರವಣಮಾಡುವುದರಿಂದ ಸಕಲ ಪ್ರತಿಬಂಧಕ ಕರ್ಮನಿವೃತ್ತಿಯಾಗಿ ಇಷ್ಟಪ್ರಾಪ್ತಿಯಾಗುವುದು. ಆದಿಪುರುಷನಾದ ಶ್ರೀಹರಿ ಪರಮಾತ್ಮನ ನರಸಿಂಹಲೀಲೆ, ದೈತ್ಯರಾಜನ ವಧೆ ಹಾಗೂ ಸಜ್ಜನರಲ್ಲಿ ಶ್ರೇಷ್ಠರಾದ ಶ್ರೀಪ್ರಹ್ಲಾದರಾಜರ ಅನುಭಾವವನ್ನು ಶ್ರವಣಮಾಡಿ, ಮತ್ತೆ ಮತ್ತೆ ಮೆಲುಕು ಹಾಕುವುದರಿಂದ ಶಾಶ್ವತ ಸುಖವು ದೊರಕುವುದು. ಅಂದಮೇಲೆ ಐಹಿಕಾದಿ ಸುಖ, ಮಂಗಳಗಳು ದೊರಕುವುದರಲ್ಲಿ ಸಂದೇಹವೇನಿದೆ?
ಶ್ರೀರಮಾಪತಿಯಾದ ನಾರಾಯಣನನ್ನು ಸಾಕನ ತಿಳಿಯಲು, ವರ್ಣಿಸಲು ಬ್ರಹ್ಮ-ರುದ್ರೇಂದ್ರಾದಿ ದೇವತೆಗಳಿಗೂ ಸಾಧ್ಯವಿಲ್ಲ. ಆದರೆ ಶ್ರೀಪ್ರಹ್ಲಾದರಾಜರಂತೆ - ಮೌನ, ಭಕ್ತಿ, ಶಾಂತಿಗಳಿಂದ ಇಂದ್ರಿಯನಿಗ್ರಹಪೂರ್ವಕವಾಗಿ, ವಿರಕ್ತಿಯಿಂದ ಪರಮಾತ್ಮನನ್ನು ಅರ್ಚಿಸಿದರೆ ಶ್ರೀಹರಿಯು ಪ್ರಸನ್ನನಾಗಿ ಅನುಗ್ರಹಿಸುವನೆಂಬ ವಿಚಾರವು ಶ್ರೀಪ್ರಹ್ಲಾದರ ಚರಿತೆಯಿಂದ ದೃಢವಾಗುವುದು. ಇಂತು ಜಗತ್ತಿಗೆ ಒಂದು ಅದ್ಭುತವಾದ ಶ್ರೀಹರಿಯ ರೂಪವನ್ನು ತೋರಿಸಿಕೊಟ್ಟು ವಿಖ್ಯಾತರಾದ ಮಂಗಳಪ್ರದವಾದ ಶ್ರೀಪ್ರಹ್ಲಾದರಾಜರ 'ಭಕ್ತಿವಿಜಯ್ 'ರೂಪವಾದ ಈ ಕಥಾನಕವು ಭಗವದ್ಭಕ್ತರೂ, ಧರ್ಮಾಭಿಮಾನಿಗಳೂ ಆದ ಸರ್ವ ಸಜ್ಜನರಿಗೂ ಸನ್ಮಂಗಳವನ್ನೀಯಲೆಂದು ಪ್ರಾರ್ಥಿಸುತ್ತಾರಮಿಸುವೆವು.
II ಕಲಿಯುಗ ಕಲ್ಪತರುವಿನಲ್ಲಿ ಶ್ರೀಪ್ರಹ್ಲಾದ ಚರಿತರೂಪ ದ್ವಿತೀಯೋಲ್ಲಾಸವು ಮುಗಿದುದು ||