
ಕಲಿಯುಗ - ಕಲ್ಪತರು
ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು
ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು
೧೦. ಪಿತಾ-ಪುತ್ರರ ದ್ವಂದ್ವಾರಂಭ!
ತ್ರಿಲೋಕವಿಜಯ ಗಳಿಸಿದ ಹಿರಣ್ಯಕಶ್ಯಪನು ತನ್ನ ರಾಜಧಾನಿಯಲ್ಲಿ ಸುರರನ್ನು ಜಯಿಸಿದ ನಿಮಿತ್ತವಾಗಿ “ವಿಜಯೋತ್ಸವ'ವನ್ನು ನೆರವೇರಿಸುತ್ತಿದ್ದಾನೆ. ಪ್ರತಿದಿನವೂ ನರ್ತನ ಗೀತಾದಿಗಳಿಂದ ಸುರಸುಂದರಿಯನ್ನು ಮೀರಿಸುವ ರೂಪಲಾವಣ್ಯಶೋಭಿತರಾದ ದೈತ್ಯಸಾಮ್ರಾಜ್ಯದ ಆಸ್ಥಾನ ನರ್ತಕಿಯರು, ಸಂಗೀತಗಾರರು ಹಿರಣ್ಯಕಶ್ಯಪನನ್ನೂ, ಸಭಾಸದರನ್ನೂ ಎಲ್ಲರೂ ಕನಕಕಶ್ಯಪನನ್ನು ಹೊಗಳುತ್ತಿದ್ದಾರೆ. ಸಭಾಸದರ ಸ್ತುತಿ, ಓಲೈಸುವಿಕೆಗಳಿಂದ ದೈತ್ಯಸಾಮ್ರಾಟನು ಮೈಮರೆತು ಆನಂದಗೊಳಿಸುತ್ತಿದ್ದಾರೆ. ವಿವಿಧ ಭಕ್ಷ್ಯಭೋಜ್ಯಗಳ ಔತಣಕೂಟ, ಸುರಾಪಾನಾದಿಗಳಿಂದ ಎಲ್ಲರೂ ಮದೋನ್ಮತ್ತರಾಗಿದ್ದಾರೆ,
ಅಮಂದಾನಂದತುಂದಿಲನಾಗಿದ್ದಾನೆ.
ಆಗ ಪ್ರಹ್ಲಾದಕುಮಾರನು ಶ್ರೀಹರಿನಾಮಸ್ಮರಣೆ ಮಾಡುತ್ತಾ ಸಭೆಗೆ ಬಂದನು.
ರಾಗ : ಷಣ್ಮುಖಪ್ರಿಯ
ತಾಳ : ಝಂಪೆ
ಸ್ಥಿರವಲ್ಲ ವೈಭವವು ಜಗದೊಳಗೆ ಮರುಳೇ |
ನೀರಮೇಲಣಗುಳ್ಳೆಯಂತಿದನು ತಿಳಿಯೋ || ಪ ||
ಪರವಶದಿ ತಿಂದುಂಡು ಮಧುಪಾನದಿಂ ಮದಿಸಿ |
ಮೆರೆಯದಿರು ಕ್ಷಣಿಕವಿದು ವಿಷಯಸುಖ ಬಂಧಕವು || ಅ.ಪ. ||
ಹರಿಯ ಭಜಿಸದ ಜಿಜ್ಜೆ ಚರಿತೆ ಕೇಳದ ಕರ್ಣ |
ವರರೂಪ ವೀಕ್ಷಿಸದ ಕಣ್ಣಳಿದ್ದೇನು ಫಲ ? ||
ಪರಮಸುಖವೀವ ವರ ಸಿರಿರಮಣನಂಫ್ರಿಗಳ |
ಸ್ಮರಿಸು ಮೂಢನೆ ಜನುಮ ವ್ಯರ್ಥ ಮಾಡಲಿಬೇಡ || cha ||
ಅದನ್ನಾಲಿಸಿ ಅಸಮಾಧಾನವಾದರೂ ಹೊರಗೆ ತೋರ್ಪಡಿಸದೆ ಹಿರಣ್ಯಕಶ್ಯಪನು ಹುಸಿನಗೆ ಹೊರಸೂಸುತ್ತಿರಲು ಪ್ರಹ್ಲಾದನು ಮುಂದೆ ಬಂದು ತಂದೆಯೇ ವಂದಿಸುವೆನು” ಎಂದು ನಮಸ್ಕರಿಸಿದನು.
ಹಿರಣ್ಯಕಶ್ಯಪನು ಅಸಮಾಧಾನ-ಕೋಪಗಳನ್ನು ಹತ್ತಿಕ್ಕಿಕೊಂಡು “ಬಾ ಚಿರಂಜೀವಿ! ನನ್ನ ಅಂಕವನ್ನಲಂಕರಿಸು” ಎಂದು ಪ್ರಹ್ಲಾದನನ್ನು ತೊಡೆಯ ಮೇಲೆ ಕೂಡಿಸಿಕೊಂಡು ಮೈದಡವಿ, ಪುರೋಹಿತರನ್ನು ನೋಡಿ “ಆಚಾರ್ಯ ಶಂಡರೇ! ನಮ್ಮ ಈ ದಿಗ್ವಿಜಯೋತ್ಸವ ನಿಮಿತ್ತವಾದ ವಿಶ್ರಾಂತಿಯು ಮುಗಿದ ಮೇಲೆ ನಿಮ್ಮ ಶಾಸ್ತ್ರ ಮತ್ತು ಶಸ್ತ್ರವಿದ್ಯಾಲಯದಲ್ಲಿ ನಮ್ಮ ಕುಮಾರ ಪ್ರಹ್ಲಾದನ ಹೆಸರನ್ನು ದಾಖಲು ಮಾಡಿಸಿ ವಿದ್ಯಾಭ್ಯಾಸ ಮಾಡಿಸಿರಿ” ಎಂದು ಹೇಳಿದನು. ಶಂಡಾಮರ್ಕರು ಸಂತೋಷದಿಂದ “ಆಗಬಹುದು ಮಹಾಪ್ರಭು” ಎಂದು ವಿಜ್ಞಾಪಿಸಿದರು.
ಹಿರಣ್ಯಕಶ್ಯಪುವು ಪ್ರಹ್ಲಾದನ ಬೆನ್ನಿನ ಮೇಲೆ ಕೈಯಾಡಿಸುತ್ತಾ “ಕುಮಾರಾ, ನೀನು ನಮ್ಮ ದೈತ್ಯವಂಶಭೂಷಣವಾಗಿ ಕೀರ್ತಿ ಗಳಿಸಬೇಕು. ಆಚಾರ್ಯರು ಉಪದೇಶಿಸಿದಂತೆ ನಡೆದು ನನ್ನ ಮನಸ್ಸಂತೋಷಪಡಿಸಬೇಕು” ಎನಲು ಪ್ರಹ್ಲಾದನು ವಿನೀತನಾಗಿ “ಆಗಲಿ ತಾತ! ನಾನಿನ್ನು ಮಾತೆಯ ಬಳಿಗೆ ಹೋಗುವೆನು” ಎಂದು ತಂದೆಗೆ ವಂದಿಸಿ ಅಂತಃಪುರಕ್ಕೆ ತೆರಳಿದನು.